ಉಡುಪಿ: ಕರಾವಳಿ ಹೆಮ್ಮೆಯ ಪುತ್ರ, ಭಾರತೀಯ ವಾಯುಸೇನೆ ಗ್ರೂಪ್ ಕ್ಯಾಪ್ಟನ್ ಸಂದೀಪ್ ಶೆಟ್ಟಿ ಅವರು 77ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿಗಳು ನೀಡುವ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ದೇಶದ ಭದ್ರತೆಗಾಗಿ ಸಲ್ಲಿಸಿದ ಮಹತ್ವದ ಸೇವೆ ಮತ್ತು ಅಪೂರ್ವ ಕಾರ್ಯನಿರ್ವಹಣೆಗೆ ಈ ಗೌರವ ಲಭಿಸಿದೆ.

ಗ್ರೂಪ್ ಕ್ಯಾಪ್ಟನ್ ಸಂದೀಪ್ ಶೆಟ್ಟಿ ಅವರು 2025ರ ಮೇ ತಿಂಗಳಲ್ಲಿ ಪಾಕಿಸ್ತಾನದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಕೈಗೊಂಡ ಆಪರೇಷನ್ ಸಿಂಧೂರ ಎಂಬ ಮಹತ್ವದ ಸೈನಿಕ ಕಾರ್ಯಾಚರಣೆಯಲ್ಲಿ ಪ್ರಮುಖವಾಗಿ ಭಾಗವಹಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ, ನೌಕಾಪಡೆ ಹಾಗೂ ವಾಯುಪಡೆ ಜಂಟಿಯಾಗಿ ಕಾರ್ಯನಿರ್ವಹಿಸಿದ್ದು, ದೇಶದ ರಕ್ಷಣಾ ವ್ಯವಸ್ಥೆಯ ಶಕ್ತಿ ಹಾಗೂ ಸಮನ್ವಯವನ್ನು ಜಗತ್ತಿಗೆ ತೋರಿಸಿತು. ಈ ಮಹತ್ವದ ಕಾರ್ಯಾಚರಣೆಯಲ್ಲಿ ಸಂದೀಪ್ ಶೆಟ್ಟಿ ಅವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು ಎನ್ನಲಾಗಿದೆ.

ಉಡುಪಿ ಜಿಲ್ಲೆಯ ಕರಾವಳಿ ಪ್ರದೇಶದವರಾದ ಸಂದೀಪ್ ಶೆಟ್ಟಿ ಅವರು ಸದಾಶಿವ ಶೆಟ್ಟಿ ಕೊಂಡಾಡಿ ಮತ್ತು ದೇವಕಿ ಶೆಟ್ಟಿ ಶಾನಕಟ್ಟು ದಂಪತಿಯ ಪುತ್ರರು. ಕಳೆದ 20 ವರ್ಷಗಳಿಂದ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಶಿಸ್ತು, ಕರ್ತವ್ಯನಿಷ್ಠೆ ಹಾಗೂ ನಾಯಕತ್ವ ಗುಣಗಳಿಂದ ಗುರುತಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಜಮ್ಮು–ಕಾಶ್ಮೀರದ ಶ್ರೀನಗರದಲ್ಲಿರುವ ವಾಯುನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅತ್ಯಂತ ಸವಾಲಿನ ಪರಿಸ್ಥಿತಿಗಳಲ್ಲಿಯೂ ದೇಶದ ಭದ್ರತೆಯನ್ನು ಕಾಪಾಡುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಸಂದೀಪ್ ಶೆಟ್ಟಿ ಅವರಿಗೆ ಲಭಿಸಿದ ಈ ವಿಶಿಷ್ಟ ಸೇವಾ ಪದಕವು ಕೇವಲ ಅವರ ವೈಯಕ್ತಿಕ ಸಾಧನೆಯಷ್ಟೇ ಅಲ್ಲದೆ, ಉಡುಪಿ ಜಿಲ್ಲೆ ಹಾಗೂ ಕರಾವಳಿ ಪ್ರದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಅವರ ಸಾಧನೆ ಯುವ ಪೀಳಿಗೆಗೆ ದೇಶಸೇವೆ, ಶೌರ್ಯ ಮತ್ತು ತ್ಯಾಗದ ಪ್ರೇರಣೆಯಾಗಿ ನಿಲ್ಲಲಿದೆ.



