ಉಡುಪಿ : ಕರಾವಳಿ ಎಂದರೆ ಅದು ದೈವಾರಾಧನೆಯ ಮೂಲ ಸ್ಥಾನ ಎಂದರೆ ತಪ್ಪಾಗಲಾರದು. ಯಾಕೆಂದರೆ, ಇಲ್ಲಿ ಎಷ್ಟು ದೇವಸ್ಥಾನಗಳು ಇದೆಯೋ ಅದರ ದುಪ್ಪಟ್ಟು ಸಂಖ್ಯೆಯಲ್ಲಿ ದೈವಸ್ಥಾನಗಳೇ ಇರುವ ಹಿನ್ನಲೆಯಲ್ಲಿ ಈ ಮಾತು ಹೇಳಬಹುದಾಗಿದೆ. ಮಾರ್ಚ್ ಏಪ್ರಿಲ್ ಬಂತು ಎಂದರೆ ಇಲ್ಲಿ ಸಾವಿರಾರು ದೈವ ನೇಮೋತ್ಸವಗಳು ನಡೆಯುತ್ತದೆ. ಈ ಬಾರಿ ಇಂತಹ ನೇಮೋತ್ಸವಗಳಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದ ದೈವದ ನೇಮೋತ್ಸವ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಹೌದು ಈ ಕುತೂಹಲಕ್ಕೆ ಕಾರಣವಾಗಿರುವುದು ಒಂದು ವೈರಲ್ ವಿಡಿಯೋ. ಪುಟ್ಟ ಬಾಲಕನೊಬ್ಬ ದೈವ ನರ್ತಕನಾಗಿ ಅದ್ಭುತವಾಗಿ ನರ್ತಿಸಿದ ವಿಡಿಯೋ ಒಂದು ವೈರಲ್ ಆದ ಬೆನ್ನಲ್ಲಿ ಈ ದೈವ ನೇಮೋತ್ಸವ ದ ಕುರಿತು ಚರ್ಚೆ ಪ್ರಾರಂಭವಾಗಿದೆ. ಕಾರ್ಕಳ ತಾಲೂಕಿನ ಮಂಡಳಿ ಗ್ರಾಮದಲ್ಲಿರುವ ಮುಗೇರ್ಕಳ ದೈವಗಳ ಸನ್ನಿಧಾನದಲ್ಲಿ ಪ್ರತಿಷ್ಠ ವರ್ಧಂತ್ಯುತ್ಸವ ನಡೆದಿದೆ. ದೈವಸ್ಥಾನದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳ ಜೊತೆ, ತನ್ನಿ ಮಾನಿಗ ದೈವದ ಪಾತ್ರಿಯಾಗಿ ಗಗ್ಗರ ಕಟ್ಟಿದ ಬಾಲಕ ಸಮರ್ಥ್ ನರ್ತನ ಸೇವೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಕಾರ್ಕಳ ತಾಲೂಕಿನ ಸೂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿಯಾಗಿರುವ ಸಮರ್ಥ್ ಎಂಟು ಒಂಬತ್ತು ವರ್ಷದವನಾಗಿದ್ದಾಗಲೇ, ದೈವಸ್ಥಾನದಲ್ಲಿ ನರ್ತನಾಭ್ಯಾಸ ಶುರು ಮಾಡಿದ್ದ ಎನ್ನಲಾಗಿದೆ. ಅಜ್ಜ ಮೋನು ಪಾಣಾರ ದೈವ ನರ್ತಕರು, ಇನ್ನು ತಂದೆ ಹರೀಶ್ ಕೂಡ ದೈವ ನರ್ತಕ ಹೀಗಾಗಿ ಮೂರನೇ ತಲೆಮಾರಿನ ಬಾಲಕ ಸಮರ್ಥ ನಿಂದ ಈ ದೈವ ನರ್ತನ ಪರಂಪರೆ ಮುಂದುವರೆದಿದೆ. ಸದ್ಯ ಅದ್ಭುತ ಭಾವಾವೇಶದಲ್ಲಿ ಬಾಲಕ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ದೈವ ನರ್ತನದ ಕುರಿತು ಬಾಲಕನಿಗೆ ಇರುವ ಆಸಕ್ತಿಯ ಕುರಿತು ಪ್ರಶಂಸೆ ವ್ಯಕ್ತವಾಗಿದೆ.


