ಮಣಿಪಾಲ : ಕಳೆದ ವಾರವಷ್ಟೇ ಮಣಿಪಾಲ ಪೊಲೀಸರ ಕೈಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಫೈರಿಂಗ್ ನಡೆದಿದೆ.ಇತ್ತೀಚೆಗೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಹಾಗೂ ಆತನ ಸಹಚರರಿಗಾಗಿ ಮಣಿಪಾಲ ಪೊಲೀಸರ ತಂಡ ರಚಿಸಿ ಆರೋಪಿಯ ಜಾಡು ಹಿಡಿದು ಹಾಸನ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿದ್ದರು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಆರೋಪಿತ ಇಸಾಕ್ ಸೇರಿದಂತೆ ಒಟ್ಟು ನಾಲ್ಕು ಜನರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದರು. ಬಂದಿತ ನಾಲ್ವರು ಆರೋಪಿಗಳನ್ನ ಚನ್ನರಾಯಪಟ್ಟಣ ಪೊಲೀಸ್ ಠಾಣ ವ್ಯಾಪ್ತಿಯಿಂದ ಮಣಿಪಾಲಕ್ಕೆ ಕರೆತರುವ ದಾರಿ ಮಧ್ಯೆ ಹಿರಿಯಡಕ ಬಳಿ ಆರೋಪಿ ಇಸಾಕ್ ವಾಂತಿ ಮತ್ತು ಮೂತ್ರ ವಿಸರ್ಜನೆಯ ನಾಟಕವಾಡಿದ್ದಾನೆ.

ಮಾನವೀಯ ನೆಲೆಯಲ್ಲಿ ಮೂತ್ರ ವಿಸರ್ಜನೆಗೆ ಪೊಲೀಸರು ಅವಕಾಶ ಕೊಟ್ಟಾಗ ಉಡುಪಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ತಳ್ಳಿ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಜಟಾಪಟಿಯಲ್ಲಿ ಆರೋಪಿತನ ಕೈಗೆ ಅಳವಡಿಸಲಾಗಿದ್ದ ಲೀಡಿಂಗ್ ಚೈನ್ ಪೊಲೀಸ್ ವಾಹನದ ಎದುರಿನ ಗ್ಲಾಸ್ ಗೆ ಬಡಿದು ಗ್ಲಾಸ್ ಒಡೆದು ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಗಾಯಗೊಳಿಸಿದ್ದಾನೆ. ಆರೋಪಿ ಮತ್ತೊಮ್ಮೆ ತಪ್ಪಿಸಿಕೊಳ್ಳುವ ಯತ್ನದಲ್ಲಿರುವುದನ್ನು ಗಮನಿಸಿ ಮಣಿಪಾಲ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ದೇವರಾಜ್ ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆಯ ಹೊರತಾಗಿಯೂ ಇಸಾಕ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗಾಳಿಯಲ್ಲಿ ಗುಂಡು ಹೊಡೆದು ಮತ್ತೆ ಎಚ್ಚರಿಕೆ ನೀಡಿದ್ದಾರೆ, ಇಷ್ಟು ಎಚ್ಚರಿಕೆಯ ಬಳಿಕವು ತಪ್ಪಿಸಿಕೊಳ್ಳುವ ಯತ್ನ ಮುಂದುವರಿಸಿದ ಇಸಾಕ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ಇಸಾಕ್ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ ಓಡಿ ಹೋಗಲು ಯತ್ನಿಸಿದ್ದಾನೆ, ಈ ಸಂದರ್ಭ ಜೊತೆಗೆ ಇದ್ದ ಪೊಲೀಸ್ ಸಿಬ್ಬಂದಿಗಳಿಗೆ ಗಂಭೀರವಾಗಿ ಗಾಯವಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಮೂವರು ಪೊಲೀಸರಿಗೆ ಗಾಯವಾಗಿದ್ದು ಮಣಿಪಾಲದ ಇನ್ಸ್ಪೆಕ್ಟರ್ ದೇವರಾಜ್, ಹಿರಿಯಡಕ ಎಸ್ಐ ಮಂಜುನಾಥ್, ಉಡುಪಿ ನಗರ ಠಾಣೆ ಸಿಬ್ಬಂದಿ ಹೇಮಂತ್ ಗಾಯಗೊಂಡು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಆರೋಪಿ ಇಸಾಕ್ ಎಡಗಾಲಿಗೆ ಶೂಟ್ ಮಾಡಲಾಗಿದ್ದು ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆಲವು ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದ ಗರುಡ ಗ್ಯಾಂಗ್ ಖ್ಯಾತಿಯ ಇಸಾಕ್ ಕಳೆದ ವರ್ಷ ಕುಂಜಿಬೆಟ್ಟಿ ನಲ್ಲಿ ನಡೆದ ಗ್ಯಾಂಗ್ ವಾರ್ ನಲ್ಲಿ ಪ್ರಮುಖ ಆರೋಪಿ ಎಂದು ಗುರುತಿಸಲಾಗಿತ್ತು. ಇನ್ನು ನೆಲಮಂಗಲದಲ್ಲಿ ನಡೆದ ದರೋಡೆ ಪ್ರಕರಣದಲ್ಲೂ ಕೂಡ ಇಸಾಕ್ ಭಾಗಿಯಾಗಿದ್ದು, ನೆಲಮಂಗಲ ಪೊಲೀಸರಿಗೂ ಬೇಕಾದ ಅರೋಪಿಯಾಗಿದ್ದ. ಕಳೆದ ವಾರವಷ್ಟೆ ಮಣಿಪಾಲದಲ್ಲಿ ನಡೆದ ಕಾರ್ಯಚರಣೆ ವೇಳೆ ಸರಣಿ ಅಪಘಾತ ನಡೆಸಿ ಆರೋಪಿ ಇಸಾಕ್ ಮಣ್ಣಪಳ್ಳ ಬಳಿಯಿಂದ ಕತ್ತಲೆಯಲ್ಲಿ ಮಾಯವಾಗಿದ್ದ. ಬಳಿಕ ಆತನ ಪ್ರೇಯಸಿ ಸುಝೈನ್ ಹಾಗೂ ಪ್ರೇಯಸಿ ತಾಯಿಯನ್ನು ಮಣಿಪಾಲ ಪೊಲೀಸ್ ರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಸದ್ಯ ಆರೋಪಿ ಈಸಾಕ್ ಹಾಗೂ ಉಳಿದ ಮೂವರು ಮಣಿಪಾಲ ಪೊಲೀಸರ ವಶಕ್ಕೆ ಸಿಕ್ಕಿದ್ದು ತನಿಖೆ ಮುಂದುವರೆಯುತ್ತಿದೆ
