ಉಡುಪಿ : ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಬೇರ್ಪಡಿಸುವ ಬೇಡಿಕೆಯನ್ನು ಮುಂದಿಟ್ಟುಕೊಂಡು ರೈತ ಸಂಘ ಬೈಂದೂರು ವತಿಯಿಂದ ತಾಲೂಕು ಆಡಳಿತ ಸೌಧದ ಎದುರು ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಇಂದು 33ನೇ ದಿನಕ್ಕೆ ಕಾಲಿಟ್ಟಿದೆ. ಜಿಲ್ಲಾಡಳಿತ ಮತ್ತು ಸರ್ಕಾರದ ನಿರ್ಲಕ್ಷ್ಯ ವಿರುದ್ಧ ಆಕ್ರೋಶಗೊಂಡ ರೈತರು ಹತ್ತಾರು ಕೋಣಗಳೊಂದಿಗೆ ಬೈಂದೂರು ಪಟ್ಟಣ ಪಂಚಾಯತ್ ಹಾಗೂ ತಾಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರು. ರೈತರಿಗೆ ತೊಂದರೆ ಆಗಿದರೆ ಜಿಲ್ಲಾಡಳಿತ ಹೊಣೆಗಾರ. ಕಳೆದ ಒಂದೂವರೆ ತಿಂಗಳಿಂದ ಕೃಷಿ ಕೆಲಸ ಬಿಟ್ಟು ನ್ಯಾಯಕ್ಕಾಗಿ ಧರಣಿ ನಡೆಸುತ್ತಿದ್ದರೂ, ಯಾವುದೇ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದನ್ನು ಅವರು ಖಂಡಿಸಿದರು. ಸರಕಾರದಿಂದ ಸ್ಪಂದನೆ ಇಲ್ಲದಿದ್ದರೆ ಸೋಮವಾರದಿಂದ ಉಗ್ರ ಪ್ರತಿಭಟನೆ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.

ರೈತರು ಆಡಳಿತ ಮತ್ತು ಜನಪ್ರತಿನಿಧಿಗಳ ನಿಷ್ಕ್ರಿಯತೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು, ಮಾಜಿ ಶಾಸಕರು, ಸಂಸದರು ಹಾಗೂ ಉಸ್ತುವಾರಿ ಸಚಿವರು ಸ್ಥಳಕ್ಕೆ ಬಂದು ಸಮಸ್ಯೆ ಕುರಿತು ಸರ್ಕಾರದ ಗಮನಸೆಳೆಯಬೇಕು ಎಂದು ಆಗ್ರಹಿಸಿದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ರೈತರಿಗೆ ನ್ಯಾಯ ದೊರಕಿಸಲು ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿವೆ. ಉಸ್ತುವಾರಿ ಸಚಿವರು ಮತ್ತು ವಿಧಾನಪರಿಷತ್ ಸದಸ್ಯರ ಮೂಲಕ ವಿಷಯವನ್ನು ಸರಕಾರದ ಮಟ್ಟದಲ್ಲಿ ಚರ್ಚೆ ಮಾಡಲಾಗಿದ್ದು, ಕಡತ ವಿಲೇವಾರಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ತಾಲೂಕು ಕಂಬಳ ಸಮಿತಿ ಭಾಗಿಯಾಗುವ ಮೂಲಕ ಹತ್ತು ಕೋಣಗಳೊಂದಿಗೆ ಬೈಂದೂರು ಪಟ್ಟಣ ವ್ಯಾಪ್ತಿಯಲ್ಲಿ ಭವ್ಯ ಜಾಥಾ ನಡೆಸಿ ಪಟ್ಟಣ ಪಂಚಾಯತ್ ಹಾಗೂ ತಾಲೂಕು ಆಡಳಿತ ಸೌಧದ ಎದುರು ಕೋಣಗಳನ್ನು ಕಟ್ಟಿ ನ್ಯಾಯಕ್ಕಾಗಿ ಧ್ವನಿ ಎತ್ತಿದರು.



