ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಇಡೀ ಪ್ರಕರಣದ ಕಿಂಗ್ ಪಿನ್ ಮುರುಗನ್ ಡಿ ದೇವರ್ ಮೇಲೆ ಪೊಲೀಸರು ಶೂಟ್ ಮಾಡಿದ್ದಾರೆ. ಕರ್ನಾಟಕ- ಕೇರಳ ಗಡಿಭಾಗದ ಅಜ್ಜಿನಡ್ಕ ಎಂಬಲ್ಲಿ ಸ್ಥಳ ಮಹಜರು ನಡೆಸುತ್ತಿದ್ದಾಗ ಆರೋಪಿ ಮುರುಗನ್ ಡಿ ದೇವರ್ ಎಸ್ಕೇಪ್ ಆಗಲು ಯತ್ನಿಸಿದ ವೇಳೆ ಪೊಲೀಸರು ಗುಂಡುಹಾರಿಸಿದ್ದಾರೆ.

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮುರುಗನ್ ದೇವರ್ ನನ್ನು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದರು. ಈಗಾಗಲೇ ಬ್ಯಾಂಕ್ ದರೋಡೆ ಪ್ರಕರಣದ ಪ್ರಮಖ ಎಲ್ಲಾ ಆರೋಪಿಗಳನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಇದೀಗ ತನಿಖೆ ಮುಂದಿನ ಭಾಗವಾಗಿ ಆರೋಪಿಗಳನ್ನು ಸ್ಥಳ ಮಹಜರು ಮಾಡಲು ಕೊಂಡೊಯ್ಯಲಾಗುತ್ತಿದ್ದಾಗ ಈ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ಸ್ಥಳ ಮಹಜರು ಉದ್ದೇಶಕ್ಕಾಗಿ ಕರೆದೊಯ್ದಿದ್ದಾಗ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ, ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ಫೈರಿಂಗ್ ಮಾಡಿದ್ದು ಕಾಲಿಗೆ ಗುಂಡೇಟು ಬಿದ್ದಿದೆ. ಸದ್ಯ ಗಾಯಾಳು ಆರೋಪಿಯನ್ನು ದೇರಳಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಯಲ್ಲಿ ಪೊಲೀಸ್ ಸಿಬ್ಬಂದಿ ಮಂಜುನಾಥ್ ಎಂಬವರಿಗೆ ಗಾಯವಾಗಿದೆ ಎನ್ನಲಾಗಿದೆ.