ಉಡುಪಿ : ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕೊಲ್ಲೂರಿನ ಸಮಗ್ರ ಅಭಿವೃದ್ಧಿಗೆ ಕೊಲ್ಲೂರು ಪ್ರಾಧಿಕಾರವನ್ನು ಸ್ಥಾಪಿಸುವುದಾಗಿ ರಾಜ್ಯ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಅವರು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಯಡ್ತರೆ ಗ್ರಾಮದಲ್ಲಿ ನಿರ್ಮಾಣಗೊಂಡ ನೂತನ ಬೈಂದೂರು ಬಸ್ ನಿಲ್ದಾಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಸಚಿವರು, ಸ್ಥಳೀಯ ಜನಪ್ರತಿನಿಧಿಗಳ ಒಗ್ಗಟ್ಟಿನ ಮನವಿಯಂತೆ ಚಂದ್ರಗುತ್ತಿ ಪ್ರಾಧಿಕಾರದ ಮಾದರಿಯಲ್ಲಿ ಕೊಲ್ಲೂರು ಪ್ರಾಧಿಕಾರ ರಚನೆಗೆ ಸರ್ಕಾರ ತೀರ್ಮಾನಿಸಿದೆ ಎಂದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪ್ರಸ್ತುತ ಆಡಳಿತ ಮಂಡಳಿಯ ಅವಧಿ ಮುಗಿದ ನಂತರ ಪ್ರಾಧಿಕಾರ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದರು.

ಕೊಲ್ಲೂರಿಗೆ ಕೆಎಸ್ಸಾರ್ಟಿಸಿ ಬಸ್ ಸಂಪರ್ಕ ಹೆಚ್ಚಿಸುವ ಬೇಡಿಕೆಗೆ ಸ್ಪಂದಿಸಿದ ಅವರು, ಕೊರೋನಾ ನಂತರ ಸ್ಥಗಿತಗೊಂಡಿದ್ದ ಲಾಂಗ್ ರೂಟ್ ಸೇವೆಗಳನ್ನು ಪುನಾರಂಭಿಸಲು 70 ಹೊಸ ಲಕ್ಸುರಿ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಮಂಗಳೂರು ವಿಭಾಗಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು. ಜೊತೆಗೆ 2,000 ಸಾಮಾನ್ಯ ಬಸ್‌ಗಳ ಖರೀದಿಯಲ್ಲಿ 900 ಬಸ್‌ಗಳನ್ನು ಕೆಎಸ್ಸಾರ್ಟಿಸಿಗೆ ನೀಡಲಾಗುತ್ತಿದ್ದು, ಮಂಗಳೂರು–ಉಡುಪಿ ಜಿಲ್ಲೆಗಳಿಗೆ ಹೆಚ್ಚಿನ ಬಸ್‌ಗಳು ಲಭ್ಯವಾಗಲಿವೆ ಎಂದು ತಿಳಿಸಿದರು.

ಮಂಗಳೂರು ವಿಭಾಗಕ್ಕೆ ಶೀಘ್ರದಲ್ಲೇ 100 ಎಲೆಕ್ಟ್ರಿಕ್ ಬಸ್‌ಗಳು ಸೇರ್ಪಡೆಯಾಗಲಿವೆ ಎಂದ ಸಚಿವರು, ಖಾಸಗಿ ಬಸ್ ಮಾಲೀಕರ ತಡೆಯಾಜ್ಞೆಗಳ ಕಾರಣ ಕೆಲವು ಗ್ರಾಮೀಣ ಮಾರ್ಗಗಳಲ್ಲಿ ಬಸ್ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಹೇಳಿದರು. ಈ ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸಮಾರಂಭದಲ್ಲಿ 2022ರ ಅಪಘಾತ ರಹಿತ ಚಾಲಕರಾಗಿ ಆಯ್ಕೆಯಾದ ಆರು ಮಂದಿ ಸಿಬ್ಬಂದಿಗಳಿಗೆ ಬೆಳ್ಳಿ ಪದಕ, 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



