ಉಡುಪಿ : ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಅಪರೂಪದ ಹಾಗೂ ಅರ್ಥಪೂರ್ಣ ಗ್ರಾಮ ವಾಸ್ತವ್ಯ ನಡೆಸುವ ಮೂಲಕ ಸಾಮಾಜಿಕ ಸಮಾನತೆಯ ಸ್ಪಷ್ಟ ಸಂದೇಶ ನೀಡಿದರು. ಕರಾವಳಿ ಭಾಗದ ಅತ್ಯಂತ ಹಿಂದುಳಿದ ಸಮುದಾಯವೆಂದು ಪರಿಗಣಿಸಲ್ಪಡುವ ಕೊರಗ ಸಮುದಾಯದ ಕುಟುಂಬದ ಮನೆಯಲ್ಲಿ ಅವರು ವಾಸ್ತವ್ಯ ಹೂಡುವ ಮೂಲಕ ಸಮಾನತೆ ಸಂದೇಶ ಸಾರಿದರು.

ಬೈಂದೂರು ಕ್ಷೇತ್ರದ ಹರ್ಕೂರು ಗ್ರಾಮದ ನಾರ್ಕಳಿ ಮದುಕೊಡ್ಲು ಪ್ರದೇಶದಲ್ಲಿರುವ ಕೊರಗ ಸಮುದಾಯದ ಮನೆಯಲ್ಲಿ ತಂಗಿದ ಶಾಸಕರು, ಸಮುದಾಯದ ಜೀವನಶೈಲಿ, ಸಮಸ್ಯೆಗಳು ಹಾಗೂ ಅಭಿವೃದ್ಧಿ ಅಗತ್ಯಗಳ ಕುರಿತು ಮುಖಾಮುಖಿ ಸಂವಾದ ನಡೆಸಿದರು. ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಗೌರವ ಸಲ್ಲಿಸಿದ ಅವರು, ಕೊರಗ ಸಮಾಜ ಮುಖ್ಯವಾಹಿನಿಗೆ ಸೇರುತ್ತಿರುವುದು ಸಂತಸದ ಸಂಗತಿ ಎಂದರು.



“ಕೊರಗರು ಹಿಂದೂ ಸಮಾಜದ ಅವಿಭಾಜ್ಯ ಅಂಗ. ಎಲ್ಲರೂ ಅಭಿವೃದ್ಧಿಯ ಪಥದಲ್ಲಿ ಜೊತೆಯಾಗಿ ಸಾಗಬೇಕು” ಎಂದು ಭರವಸೆ ನೀಡಿದ ಶಾಸಕರು, ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಸಂಪೂರ್ಣ ಬೆಂಬಲವಿರುವುದಾಗಿ ಹೇಳಿದರು. ಶಾಸಕರ ಈ ಮಾನವೀಯ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.



