ಉಡುಪಿ : ಬುಡಕಟ್ಟು ಕೊರಗ ಸಮುದಾಯವು ಅತಿ ಹಿಂದುಳಿದ ಸಮುದಾಯವಾಗಿದ್ದು ಪಿ. ವಿ. ಟಿ. ಜಿ ಎಂದು ಗುರುತಿಸಲ್ಪಟ್ಟಿದ್ದು ಸಮುದಾಯದ ಜನಸಂಖ್ಯೆಯು ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಕುಸಿಯುತ್ತಿರುವುದು ಖೇದಕರ ಈ ನಿಟ್ಟಿನಲ್ಲಿ ಸರ್ಕಾರವು ಆದ್ಯತೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಶಿರ್ವದ ಪೆರ್ನಾಲ್ ನಲ್ಲಿ ಕೊರಗರ ಅಭಿವೃದ್ಧಿ ಸಂಘದ ಸಂಘಗಳ ಒಕ್ಕೂಟ, ಕರ್ನಾಟಕ ಕೇರಳ ಮತ್ತು ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು ಇದರ ಸಂಯೋಜನೆಯಲ್ಲಿ ನಡೆದ ವಿಶ್ವ ಮಹಿಳೆಯರ ದಿನಾಚರಣೆ -2025 ಮತ್ತು ಡಾ. ಬಿ. ಆರ್. ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳು ಕೊರಗರ ಸಾಮಾಜಿಕ ನ್ಯಾಯ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿನ ಮೂಲ ನಿವಾಸಿಗಳಾದ ಕೊರಗರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಔದ್ಯೋಗಿಕವಾಗಿ ಪ್ರಗತಿಯು ಸಾಧ್ಯವಾಗುತ್ತಿಲ್ಲ. ಸರ್ಕಾರವು ಯಾವುದೇ ಯೋಜನೆಗಳನ್ನು ಕೈಗೊಂಡರು ಸಮರ್ಪಕವಾಗಿ ಅನುಷ್ಠಾನವಾಗುವುದನ್ನು ಮುತುವರ್ಜಿವಹಿಸಬೇಕು. ಕೊರಗಲ್ಲಿ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯ ಹೆಚ್ಚುವಂತೆ ಮಾಡಿ ಹೆಚ್ಚು ಹೆಚ್ಚು ಅವಕಾಶವನ್ನು ಸೃಷ್ಟಿಸಬೇಕು ಹಾಗೂ ವಿಶೇಷವಾಗಿ ನೇರ ನೇಮಕಾತಿಯ ಮುಖಾಂತರ ಉದ್ಯೋಗ ನೀಡಬೇಕು ಹಾಗೂ ಕೊರಗರು ಡಾ. ಬಿ. ಆರ್. ಅಂಬೇಡ್ಕರ್ ಆಶಯದಂತೆ ತಮ್ಮ ಅಭಿವೃದ್ಧಿಗಾಗಿ ನಿರಂತರ ಹೋರಾಟಗಳನ್ನು ಮಾಡಬೇಕು ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಮಣಿಪಾಲ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಐಡಾ ಡಿ’ಸೋಜಾ ಮಾತನಾಡುತ್ತಾ ಸಮುದಾಯವು ತನ್ನದೇ ಆದ ಅನನ್ಯತೆ, ಸಂಸ್ಕೃತಿ ಮತ್ತು ವಿಶಿಷ್ಟ ಭಾಷೆಯನ್ನು ಹೊಂದಿದ್ದು ಸಾಮುದಾಯಿಕ ಗುರಿಯನ್ನು ಸಾಧಿಸಲು ಸಂಘಟಿತರಾಗುವುದು ಬಹಳ ಮುಖ್ಯ ಎಂದು ಹೇಳಿದರು.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸುಶೀಲ ನಾಡರವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಡಾ. ಸಬಿತಾ ಗುಂಡ್ಮಿ ಮತ್ತು ಸಮಗ್ರ ಗ್ರಾಮೀಣ ಆಶ್ರಮದ ಸಂಯೋಜಕರಾದ ಅಶೋಕ ಶೆಟ್ಟಿ ಉಪಸ್ಥಿತರಿದ್ದರು.
ಪದ್ಮ ಎಸ್ ವೇಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸುಪ್ರಿಯಾ ಎಸ್. ಕಿನ್ನಿಗೋಳಿಗೈದರು. ಕಾರ್ಯಗಾರದಲ್ಲಿ ಐವತ್ತು ಅಧಿಕ ಮಂದಿ ಸಮುದಾಯ ಭಾಂದವರು ಸಕ್ರಿಯವಾಗಿ ಭಾಗವಹಿಸಿದ್ದರು.


