ಉಡುಪಿ: ಕೇರಳದ ಕನ್ನಡ ಶಾಲೆಗಳ ಮೇಲೆ ಮಲಯಾಳಂ ಭಾಷೆ ಹೇರಿಕೆ ಮಾಡುವ ಪ್ರಯತ್ನವನ್ನು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ತೀವ್ರವಾಗಿ ಖಂಡಿಸಿದ್ದಾರೆ. ಕೇರಳ ಸರ್ಕಾರ ಸದಾ ದ್ವಂದ್ವ ನೀತಿ ಅನುಸರಿಸುತ್ತಿದ್ದು, ಈ ಹಿಂದೆಯೇ ಕನ್ನಡ ಪ್ರದೇಶವಾದ ಕಾಸರಗೋಡಿನಲ್ಲಿ ಮಲಯಾಳಂ ಕಡ್ಡಾಯ ಮಾಡುವ ಪ್ರಕ್ರಿಯೆ ನಡೆದಿತ್ತು. ನಮ್ಮ ಹಿರಿಯರ ಹೋರಾಟದ ಫಲವಾಗಿ ಆ ಯತ್ನ ಮುಂದೂಡಲ್ಪಟ್ಟಿತ್ತು. ಇದೀಗ ಮತ್ತೆ ಕಮ್ಯುನಿಸ್ಟ್ ಸರ್ಕಾರ ಕನ್ನಡದ ಮೇಲೆ ಗದಾಪ್ರಹಾರ ಮಾಡಲು ಹೊರಟಿದೆ ಎಂದು ಅವರು ಆರೋಪಿಸಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಸರಗೋಡಿನಲ್ಲಿ ಕನ್ನಡವೇ ಪ್ರಧಾನ ಭಾಷೆ. ಕನ್ನಡದ ಸ್ಥಾನವನ್ನು ಉಳಿಸಿಕೊಂಡು ಮಲಯಾಳಂಗೆ ಆದ್ಯತೆ ನೀಡಬೇಕು. ಆ ಪ್ರದೇಶದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು. ಇಲ್ಲವಾದರೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಸಿದರು. ಈ ವಿಚಾರದಲ್ಲಿ ನಮ್ಮ ರಾಜ್ಯ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿಗಳು ಸ್ಪಷ್ಟ ಹಾಗೂ ಕಠಿಣ ನಿಲುವು ತಾಳಬೇಕು ಎಂದು ಆಗ್ರಹಿಸಿದರು. ಕನ್ನಡವನ್ನು ಕೊನೆಗಾಣಿಸುವ ಪ್ರಯತ್ನ ನಡೆದರೆ, ನಮ್ಮ ರಾಜ್ಯದಲ್ಲೂ ಸಾಕಷ್ಟು ಕೇರಳಿಗರು ವಾಸಿಸುತ್ತಿದ್ದಾರೆ ಎಂಬುದನ್ನು ಕೇರಳ ಸರ್ಕಾರ ಮನಗಾಣಬೇಕು. ಬೆಂಗಳೂರು ಸೇರಿದಂತೆ ವಿವಿಧೆಡೆ ಕೇರಳದ ವರ್ತನೆಯನ್ನು ನಾವು ನೋಡಿದ್ದೇವೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕೇರಳ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದರು.

ಭಾಗೀರಥಿ ಮುರುಳ್ಯ ಅವಮಾನ ಪ್ರಕರಣ:
ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮಾನಸಿಕತೆ ಸ್ಪಷ್ಟವಾಗುತ್ತದೆ. ಶಾಸಕಿಯಾಗುವುದು ಸುಲಭದ ಕೆಲಸವಲ್ಲ; ಪಕ್ಷ ಟಿಕೆಟ್ ನೀಡಬಹುದು, ಆದರೆ ಜನರ ಒಲವಿನಿಂದಲೇ ಅವರು ಶಾಸಕರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ರೀತಿಯಲ್ಲಿ ಬರಹ ಬರೆದಿರುವುದನ್ನು ನಾನು ಖಂಡಿಸುತ್ತೇನೆ. ದಲಿತ ಮಹಿಳೆಯ ಮೇಲೆ ಜಾತಿ ನಿಂದನೆ ನಡೆದಿದೆ; ತಕ್ಷಣ ಆ ವ್ಯಕ್ತಿಯನ್ನು ಬಂಧಿಸಿ ಕಠೋರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಟೀಲ್ ಒತ್ತಾಯಿಸಿದರು. ಸಿದ್ದರಾಮಯ್ಯನವರ ವಿರುದ್ಧ ಬರೆದರೆ ರಾತ್ರಿ ವೇಳೆ ಪತ್ರಕರ್ತರು ಹಾಗೂ ಸಾಮಾಜಿಕ ಜಾಲತಾಣ ನಿರ್ವಾಹಕರನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ. ಹಾಗಿದ್ದರೆ ಶಾಸಕರ ಅವಮಾನ ಪ್ರಕರಣದಲ್ಲೂ ಅದೇ ರೀತಿಯ ಕಾನೂನು ಕ್ರಮ ಜರುಗಬೇಕು ಎಂದು ಪ್ರಶ್ನಿಸಿದರು.

ಬಿಜೆಪಿ–ಜೆಡಿಎಸ್ ವಿಲೀನ ಕುರಿತು ಡಿಕೆಶಿ ಹೇಳಿಕೆ:
ಡಿಕೆ ಶಿವಕುಮಾರ್ ಇತ್ತೀಚೆಗೆ ಹೆಚ್ಚು ಕೇರಳಕ್ಕೆ ಹೋಗುತ್ತಿದ್ದಾರೆ. ಅವರು ಜ್ಯೋತಿಷ್ಯ ಕಲಿಯುತ್ತಿದ್ದಾರೆ ಅನಿಸುತ್ತದೆ. ತನ್ನನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂಬುದು ಗೊತ್ತಾಗಿ ಜ್ಯೋತಿಷ್ಯ ಹೇಳಲು ಆರಂಭಿಸಿದ್ದಾರೆ. ಶೀಘ್ರದಲ್ಲೇ ಜ್ಯೋತಿಷ್ಯ ಕಚೇರಿ ತೆರೆಯುವ ಅಂದಾಜು ಇದೆ ಎಂದು ವ್ಯಂಗ್ಯವಾಡಿದರು.

ಹುಬ್ಬಳ್ಳಿ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಗೂಂಡಾರಾಜ್ಯ ಶುರುವಾಗಿದೆ. ಸರ್ಕಾರ ಬಂದ ದಿನದಿಂದಲೇ ಪಾಕಿಸ್ತಾನ ಪರ ಘೋಷಣೆ, ಧ್ವಜ ಹಾರಾಟ, ಕೊಲೆ, ಹಲ್ಲೆ, ಅತ್ಯಾಚಾರಗಳು ಹೆಚ್ಚಾಗಿವೆ. ವಿಧಾನಸೌಧದ ಒಳಗೇ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಬಂಧಿಸಲು ಸರ್ಕಾರ ವಿಫಲವಾಗಿದೆ. ಕೆಡಿಪಿ ಸಭೆಯಲ್ಲಿ ಶಾಸಕರ ಮೇಲೆ ಕೈ ಎತ್ತುವ ಘಟನೆಗಳು, ಬಳ್ಳಾರಿಯಲ್ಲಿ ಗುಂಡು ಹಾರಾಟ ಕಾಂಗ್ರೆಸ್ ಸರ್ಕಾರದ ಮಾನಸಿಕತೆಯನ್ನು ತೋರಿಸುತ್ತವೆ ಎಂದು ಕಟೀಲ್ ಆರೋಪಿಸಿದರು. ಇದು ರಾಮರಾಜ್ಯವಲ್ಲ, ರಾವಣ ರಾಜ್ಯ; ಕರ್ನಾಟಕ ಲಂಕಾಪುರವಾಗುತ್ತಿದೆ ಎಂದು ತೀವ್ರ ಟೀಕೆ ನಡೆಸಿದರು.

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ:
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸರ್ಕಾರದ ಜಾಹೀರಾತು ನೀಡಿರುವುದು ತಪ್ಪು. ಇದು ಸರ್ಕಾರದ ಹಣದ ದುರ್ಬಳಕೆ. ಆ ಪತ್ರಿಕೆ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿದ್ದು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಜಾಮೀನಿನಲ್ಲಿದ್ದಾರೆ. ಜನಸಾಮಾನ್ಯರಲ್ಲಿ ಓದುಗರೇ ಇಲ್ಲದ ಪತ್ರಿಕೆಗೆ ಒಂದೂವರೆ ಕೋಟಿ ರೂ. ಜಾಹೀರಾತು ನೀಡಿರುವುದು ಅಕ್ಷೇಪಾರ್ಹ. ಇದು ಕಾಂಗ್ರೆಸ್ ನಾಯಕರ ವೈಯಕ್ತಿಕ ಹಣವಲ್ಲ; ಕರ್ನಾಟಕ ಸರ್ಕಾರದದು, ರಾಜ್ಯದ ಜನತೆಯ ಹಣ. ಈ ದುರುಪಯೋಗವನ್ನು ನಾವು ಖಂಡಿಸುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.



