ಉಡುಪಿ : ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯಲ್ಲಿ ಮಲ್ಪೆ ಮೀನುಗಾರರಿಗೆ ಸಂಬಂಧಿಸಿದ ಪ್ರಮುಖ ವಿಷಯ ಚರ್ಚೆಗೆ ಬಂದಿತು.

ಮಲ್ಪೆ ಮೀನುಗಾರರು ಬಳಸುತ್ತಿದ್ದ ಜಾಗವನ್ನು ಉಡುಪಿ ಶಾಸಕರಾದ ಯಶಪಾಲ್ ಸುವರ್ಣ ಅವರ ಅಧ್ಯಕ್ಷತೆಯ ಮೀನುಗಾರಿಕಾ ಫೆಡರೇಷನ್ಗೆ ಗುತ್ತಿಗೆ ನೀಡಿರುವ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕೆಂಬ ಒತ್ತಾಯ ಸಭೆಯಲ್ಲಿ ಕೇಳಿಬಂತು.

ಈ ಬೇಡಿಕೆಯನ್ನು ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೇರ ರವರು ಪ್ರಸ್ತಾಪಿಸಿದರು. ಅವರು ಈ ಸಂಬಂಧದ ಮನವಿಯನ್ನು ಸಭೆಯಲ್ಲಿ ಹಾಜರಿದ್ದ ರಾಜ್ಯ ಮೀನುಗಾರರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಂಜುನಾಥ್ ಸುನೆಗಾರ್ ರವರಿಗೆ ಅಧಿಕೃತವಾಗಿ ಸಲ್ಲಿಸಿದರು.

ಮನವಿಗೆ ಪ್ರತಿಕ್ರಿಯಿಸಿದ ಮಂಜುನಾಥ್ ಸುನೆಗಾರ್ ಅವರು, ಮಲ್ಪೆ ಮೀನುಗಾರರ ಹಿತವನ್ನು ಕಾಪಾಡಲು ರಾಜ್ಯ ಮೀನುಗಾರರ ಕಾಂಗ್ರೆಸ್ ಸಮಿತಿಯು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವುದಾಗಿ, ಸರ್ಕಾರದ ಮೂಲಕ ಗುತ್ತಿಗೆ ರದ್ದುಪಡಿಸುವತ್ತ ಅಗತ್ಯ ಪ್ರಯತ್ನಗಳು ನಡೆಯಲಿವೆ ಎಂದು ಭರವಸೆ ನೀಡಿದರು.



