ಉಡುಪಿ :ಉಡುಪಿ ನಗರ ವ್ಯಾಪ್ತಿಯ ಕುಕ್ಕಿಕಟ್ಟೆ ಸಮೀಪ ಮುಸುಕುಧಾರಿ ಕಳ್ಳರ ತಂಡವೊಂದು ಮನೆಗಳಿಗೆ ನುಗ್ಗಿ ಕಳವಿಗೆ ಯತ್ನಿಸಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಕಳ್ಳರ ಚಲನವಲನ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸ್ಥಳೀಯರ ಭಯಕ್ಕೆ ಕಾರಣವಾಗಿದೆ.

ಕುಕ್ಕಿಕಟ್ಟೆ ಮುಚ್ಚಲಗೋಡು ಸಮೀಪದ ಸುಬ್ರಹ್ಮಣ್ಯ ನಗರದ ವಿಠಲ ಪೂಜಾರಿ ಎಂಬವರ ಮನೆಗೆ ತಡರಾತ್ರಿ ಕಳ್ಲರು ನುಗ್ಗಿದ್ದು, ಮುಸುಕುಧಾರಿ ಕಳ್ಳರ ತಂಡವು ಅಲ್ಲಿ ವಸ್ತುಗಳನ್ನು ಚೆಲ್ಲಾ ಪಿಲ್ಲಿ ಮಾಡಿ ಹುಡಕಾಟ ನಡೆಸಿದೆ. ಆದರೆ ಕಳ್ಳತನ ಸೂಕ್ತವಾದ ಬೆಲೆಬಾಳುವ ವಸ್ತು ಸಿಗದ ಹಿನ್ನಲೆಯಲ್ಲಿ ಕಳ್ಳರು ಅಲ್ಲಿಂದ ತೆರಳಿದ್ದಾರೆ.

ಬಳಿಕ ಅಲ್ಲಿಯೇ ಪಕ್ಕದಲ್ಲಿರುವ ಮನೆಗೆ ನುಗ್ಗಲು ಯತ್ನಿಸುತ್ತಿರುವಾಗ ಮನೆಯವರು ಎಚ್ಚರಗೊಂಡ ಹಿನ್ನಲೆಯಲ್ಲಿ ಲೈಟ್ ಹಾಕಿದ್ದಾರೆ, ಈ ಸಂದರ್ಭ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.

ಕಳ್ಳರ ತಂಡದ ಕೃತ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಉಡುಪಿ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕಳ್ಳರು ತಂಡವಾಗಿ ಬಂದಿರುವ ವಿಷಯ ಹೊರ ಬೀಳುತ್ತಿದ್ದಂತೆ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.



