ಉಡುಪಿ : ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕುಕ್ಕಿಕಟ್ಟೆ ಮತ್ತು ಬೀಡನಗುಡ್ಡೆ ಬಳಿ ಸಂಸದರ ನಿಧಿಯಿಂದ 4 ಕೋಟಿ ರೂಪಾಯಿ ಕಾಮಗಾರಿ ನಡೆಯುತ್ತಿದ್ದು, ಸಂಪೂರ್ಣ ಹದಗೆಟ್ಟಿದೆ ಮತ್ತು ಕಾಮಗಾರಿ ಕಳಪೆಯಾಗಿದೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೇ ಕೇಳಿ ಬಂದಿದೆ. ಇದಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸ್ಪಷ್ಟನೆ ನೀಡಿದ್ದು, ಕಾಮಗಾರಿಯು ಸಂಸದರ ನಿಧಿಯಿಂದ ಅನುಷ್ಠಾನವಾಗಿದ್ದಲ್ಲ. 2023-24ನೇ ಸಾಲಿನಲ್ಲಿ ಕೇಂದ್ರ ರಸ್ತೆ ಮತ್ತು ಮೂಲ ಸೌಕರ್ಯ ನಿಧಿ ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಯ, ಮಣಿಪುರ ಸೇತುವೆಯ ಕೂಡುರಸ್ತೆಯಿಂದ ಬೀಡಿನಗುಡ್ಡೆವರೆಗೆ ಮತ್ತು ಕುಕ್ಕಿಕಟ್ಟೆಯಿಂದ ರಾಮ್‌ಪುರ ವೃತ್ತದವರೆಗೆ ಸರಿಸುಮಾರು 4.6 ಕಿ.ಮೀ ವರೆಗೆ ರಸ್ತೆ ಕಾಮಗಾರಿಯು ಪ್ರಗತಿಯಲ್ಲಿದೆ. ರಾಮ್‌ಪುರ ವೃತ್ತದಿಂದ ಮಣಿಪುರ ಸೇತುವೆಯ ಕೂಡುರಸ್ತೆಯವರೆಗೆ ರಸ್ತೆ ಡಾಂಬರೀಕರಣ ಇನ್ನೂ ಪ್ರಾರಂಭಿಸಬೇಕಾಗಿದೆ. ಈಗಾಗಲೇ ಪೂರ್ಣಗೊಂಡಿರುವ ಡಾಂಬರೀಕರಣ ಪ್ರದೇಶವಾದ ಡಯಾನ ಚಿತ್ರಮಂದಿರ, ಕುಕ್ಕಿಕಟ್ಟೆ ಹಾಗೂ ಕುಕ್ಕಿಕಟ್ಟೆಯಲ್ಲಿರುವ ರೈಲ್ವೇ ಸೇತುವೆಯ ಕೂಡು ರಸ್ತೆಯ ಬಳಿ ಡಾಂಬರೀಕರಣದ ಮೇಲ್ಮೈ ಹಾನಿಗೊಂಡಿದೆ. ರಸ್ತೆ ಕಾಮಗಾರಿ ಮುಗಿದು ಡಾಂಬರ್ ಸೆಟ್ ಹಾಕಲು ಕಾಲಾವಕಾಶ ಸಿಗದೇ ಇದ್ದು, ಅಕಾಲಿಕ ಮುಂಗಾರು ಮಳೆ ಮೇ ತಿಂಗಳಲ್ಲಿ ಸುರಿದಿರುವುದರಿಂದ ಸಹ ರಸ್ತೆಯ ಡಾಂಬಾರು ಪದರ ಹಾನಿಗೊಂಡಿದೆ ಎಂದು ಕಾಮಗಾರಿಗೆ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರು ಮತ್ತು ಗುತ್ತಿಗೆದಾರರು ಹೇಳಿದ್ದಾರೆ.
ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಆದಷ್ಟು ಬೇಗ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಾಗೂ ಯಾವುದೇ ಕಳಪೆ ಕಾಮಗಾರಿ ಆಗದಂತೆ ನಾನು ಸೂಚನೆ ನೀಡಿದ್ದೇನೆ. ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈಗಾಗಲೇ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರು ಮತ್ತು ಗುತ್ತಿಗೆದಾರರು ಸ್ಥಳ ಪರಿಶೀಲನೆಯನ್ನು ನಡೆಸಿದ್ದಾರೆ. ಅಲ್ಲದೇ, ಮಳೆಗಾಲದ ನಂತರ ಬಾಕಿಯಿರುವ ಕಾಮಗಾರಿಯನ್ನು ಮಾಡುವಾಗ ಹಾಳಾದ ಡಾಂಬರಿನ ಭಾಗವನ್ನು ಪುನಃ ಸುಸ್ಥಿತಿಗೆ ತಂದು ವಾಹನ ಸಂಚಾರಕ್ಕೆ ಯೋಗ್ಯವಾಗಿರಿಸುವ ಬಗ್ಗೆ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರು ಭರವಸೆ ನೀಡಿದ್ದಾರೆ. ಅಲ್ಲದೇ ಕಾಮಗಾರಿ ಪೂರ್ಣಗೊಂಡ ಬಳಿಕ 2 ವರ್ಷಗಳಷ್ಟು ಕಾಲ ರಸ್ತೆಯ ನಿರ್ವಹಣೆಯಲ್ಲಿರುತ್ತದೆ ಎಂದಿದ್ದಾರೆ ಎಂದು ಕೋಟ ಸ್ಪಷ್ಟಪಡಿಸಿದ್ದಾರೆ.