ಕುಂದಾಪುರ : ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲ, ಎನ್. ಎಸ್. ಎಸ್. ಯುನಿಟ್ ಕೆ.ಎಂ.ಸಿ. ಮಣಿಪಾಲ, ಗ್ರಾಮ ಪಂಚಾಯತ್ ಕುಂಭಾಶಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಂಭಾಶಿ ಇವರ ಜಂಟಿ ಸಹಯೋಗದೊಂದಿಗೆ ಮೇ 17 ರಂದು ವಿಶ್ವದಾದ್ಯಂತ ರಕ್ತದೊತ್ತಡದ ಬಗ್ಗೆ ಅರಿವು ಮೂಡಿಸುವ ದಿನವಾಗಿದ್ದು, ಆ ನಿಟ್ಟಿನಲ್ಲಿ ಮೇ 16 ಮತ್ತು 17 ರಂದು ಕೆ.ಎಂ.ಸಿ. ಮಣಿಪಾಲದ ತಜ್ಞ ವೈದ್ಯರಿಂದ ಎರಡು ದಿನಗಳ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆನೆಗುಡ್ಡೆ ಶ್ರೀ ವಿನಾಯಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಶಿಬಿರವನ್ನು ಕುಂಭಾಶಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಆನಂದ ಪೂಜಾರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಮ ಶೆಟ್ಟಿ, ಕುಂಭಾಶಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೋಭಾ, ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್, ಕುಂಭಾಶಿ ಗ್ರಾಮ ಪಂಚಾಯತ್ ನ ಸದಸ್ಯರಾದ ಕಮಲಾಕ್ಷ ಪೈ ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ಮಹೇಶ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಎರಡು ದಿನಗಳು ನಡೆದ ಶಿಬಿರದಲ್ಲಿ ಕೆ.ಎಂ.ಸಿ. ಮಣಿಪಾಲದ ತಜ್ಞ ವೈದ್ಯರಿಂದ ಗ್ರಾಮದ ಸುತ್ತಮುತ್ತಲಿನ ಜನರಿಗೆ ಉಚಿತವಾಗಿ ಬಿ.ಪಿ. ತಪಾಸಣೆ, ಮಧುಮೇಹ ತಪಾಸಣೆ ಹಾಗೂ ಕಣ್ಣಿನ ತಪಾಸಣೆ ಹಾಗೂ ಆಯ್ದ ಜನರಿಗೆ ವಯಸ್ಕರಿಗೆ ನೀಡುವ ಬಿ.ಸಿ.ಜಿ. ಲಸಿಕೆ ನೀಡಲಾಯಿತು. ಕೆ.ಎಂ.ಸಿ. ಮಣಿಪಾಲದ ಸುಮಾರು 150 ಜನ ವೈದ್ಯಕೀಯ ವಿದ್ಯಾರ್ಥಿಗಳು ಮನೆ ಮನೆಗೆ ತೆರಳಿ ರಕ್ತದೊತ್ತಡ, ಮಧುಮೇಹ ರೋಗಗಳ ಬಗ್ಗೆ ಅರಿವು ಮೂಡಿಸಿದರು. ಎನ್.ಎಸ್.ಎಸ್. ವಿಧ್ಯಾರ್ಥಿಗಳಿಂದ ಪ್ರಾಥಮಿಕ ಚಿಕಿತ್ಸೆ ಇನ್ನಿತರ ವಿಷಯದ ಕುರಿತು ಪ್ರಾತ್ಯಕ್ಷಿಕೆ ನಡೆಯಿತು. ಸಮುದಾಯ ವೈದ್ಯಕೀಯ ವಿಭಾಗದ ಸಿಬ್ಬಂಧಿ ವರ್ಗದವರು ಹಾಗೂ ಕುಂಭಾಶಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂಧಿ ವರ್ಗದವರು ಸಹಕರಿಸಿದರು.