ಉಡುಪಿ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಸರ್ಕಾರಿ ಬಸ್ ಮತ್ತು ಟಿಪ್ಪರ್ ನಡುವೆ ನಡೆದ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಟಿಪ್ಪರ್ ಚಾಲಕ ರಾಘವೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಜ.5ರಂದು ತಲ್ಲೂರು–ನೇರಳಕಟ್ಟೆ ಮಾರ್ಗದ ಶೆಟ್ರಕಟ್ಟೆ ಬಳಿ ಟಿಪ್ಪರ್ ಅತೀವೇಗವಾಗಿ ಬಂದು ಸರ್ಕಾರಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ 39 ಪ್ರಯಾಣಿಕರ ಪೈಕಿ ಹಲವರಿಗೆ ಸಾಮಾನ್ಯ ಹಾಗೂ ತೀವ್ರ ಗಾಯಗಳಾಗಿತ್ತು.

ತನಿಖೆಯಲ್ಲಿ ಟಿಪ್ಪರ್ನಲ್ಲಿ ಪರವಾನಿಗೆ ಇಲ್ಲದೇ ಮಿತಿ ಮೀರಿದ ಮಣ್ಣು ಸಾಗಾಟ, ವಿಮೆ ಇಲ್ಲದಿರುವುದು ಹಾಗೂ ಅಜಾಗರೂಕ ಚಾಲನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಟಿಪ್ಪರ್ ಚಾಲಕ, ಮಾಲಕ ಹಾಗೂ ಅನಧಿಕೃತವಾಗಿ ಮಣ್ಣು ನೀಡಿದ ವ್ಯಕ್ತಿ ಸೇರಿ ಮೂವರನ್ನು ಆರೋಪಿಗಳೆಂದು ಪರಿಗಣಿಸಲಾಗಿದೆ. ಇಬ್ಬರು ನ್ಯಾಯಾಂಗ ಬಂಧನದಲ್ಲಿದ್ದು, ಚಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ.ಇದಕ್ಕೆ ಸಂಬಂಧಿಸಿದಂತೆ ಜ.7ರಂದು ಹಂಗಳೂರು ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಮತ್ತೊಂದು ಟಿಪ್ಪರ್ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಕೃಷ್ಣಮೂರ್ತಿ ಅಡಿಗ ಸ್ಥಳದಲ್ಲೇ ಮೃತಪಟ್ಟ ಪ್ರಕರಣವೂ ದಾಖಲಾಗಿದೆ.

ಗಣಿ ಸಂಬಂಧಿತ ವಾಹನಗಳಿಂದ ನಿರಂತರ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂತಹ ವಾಹನಗಳಿಗೆ ತಕ್ಷಣವೇ ಸ್ಪೀಡ್ ಗವರ್ನರ್ ಅಳವಡಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



