ಕಾರ್ಕಳ : ಕಾರ್ಕಳ ಪುರಸಭೆ ಕಚೇರಿಗೆ ಇಂದು ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿದ ಘಟನೆ ನಡೆದಿದೆ. ಅಚಾನಕ್ ಆಗಿ ಪುರಸಭೆ ಕಛೇರಿಗೆ ಆಗಮಿಸಿದ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿ, ಬಾಕಿ ಉಳಿದಿರುವ ಕಡತಗಳು ಹಾಗೂ ವಿಳಂಬದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕಾರ್ಕಳ ಪುರಸಭೆಯಲ್ಲಿ ಸಾರ್ವಜನಿಕರಿಗೆ ಖಾತಾ ವರ್ಗಾವಣೆ, ಜನನ-ಮರಣ ಪ್ರಮಾಣಪತ್ರ, ಉದ್ದಿಮೆ ಪರವಾನಗಿ ಹಾಗೂ ಇತರೆ ಕಾರ್ಯಗಳ ಸೇವೆ ನೀಡುವಲ್ಲಿ ವಿಳಂಬವಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿ ಡಿವೈಎಸ್ಪಿ ಮಂಜುನಾಥ್ ಅವರು, ಪುರಸಭೆ ಕಚೇರಿಯ ಎಲ್ಲ ವಿಭಾಗಗಳ ಕಡತಗಳನ್ನು ಪರಿಶೀಲಿಸಿದ್ದಾರೆ.

ಈ ವೇಳೆ ಪುರಸಭೆಯ ಕಛೆರಿಯ ಜೊತೆಗೆ ಕಾರ್ಕಳ ತಾಲೂಕು ಕಛೇರಿಗೂ ಭೇಟಿ ನೀಡಿದ್ದು ಅಲ್ಲದೇ ರೆಕಾರ್ಡ್ ರೂಮ್ ಶೋಧ ನಡೆಸಿದ್ದಾರೆ. ಈ ಸಂದರ್ಭ ತಿಂಗಳುಗಳಿಂದ ಬಾಕಿ ಇರಿಸಿಕೊಂಡಿರುವ ಕೆಲವು ಫೈಲ್ ಗಳು ಅಧಿಕಾರಿಗಳಿಗೆ ಲಭ್ಯವಾಗಿದೆ ಎನ್ನಲಾಗಿದೆ. ಇದೇ ವಿಚಾರವಾಗಿ ಕಛೇರಿಯ ಸಿಬ್ಬಂದಿಗಳ ಬಳಿ ಸಕಾರಣ ನೀಡುವಂತೆ ಲೋಕಾಯುಕ್ತ ಅಧಿಕಾರಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸೇವೆಯಲ್ಲಿ ಯಾವುದೇ ವಿಳಂಬ ನೀತಿ ಅನುಸರಿಸದಂತೆ ಪಾರದರ್ಶಕ ವ್ಯವಸ್ಥೆಯಲ್ಲಿ ಸೇವೆ ನೀಡುವಂತೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.



