Wednesday, March 4, 2026

spot_img

ಕಾರ್ಕಳ ಕಾಡಂಚಿನ ಗ್ರಾಮಗಳಲ್ಲಿ ಹುಲಿ ಓಡಾಟದ ವದಂತಿ : ಖಚಿತ ಸಾಕ್ಷ್ಯ ಇಲ್ಲ..

ಉಡುಪಿ : ಕಾರ್ಕಳ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳಿಂದ ಹುಲಿ ಓಡಾಟ ನಡೆದಿದೆ ಎಂಬ ಚರ್ಚೆ ವ್ಯಾಪಕವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಹೊಂದಿಕೊಂಡಿರುವ ಅಂಡಾರು ಹಾಗೂ ಕಾಡುಹೊಳೆ–ಮಂಗಳನಗರ ಪರಿಸರದಲ್ಲಿ ಹುಲಿ ಓಡಾಡಿದ್ದು, ಅದರ ಗರ್ಜನೆ ಕೇಳಿಸಿದೆ ಎನ್ನುವ ಮಾಹಿತಿ ಗ್ರಾಮಸ್ಥರಿಂದ ಲಭ್ಯವಾಗಿದೆ. ಈ ಬಗ್ಗೆ ಕುದುರೆಮುಖ ವನ್ಯಜೀವಿ ವಿಭಾಗ ಅಧಿಕಾರಿಗಳಿಗೆ ದೂರು ಕೂಡ ಸಲ್ಲಿಸಲಾಗಿದೆ. ಆದರೆ, ನಿಜಕ್ಕೂ ಹುಲಿ ಸಂಚಾರ ನಡೆದಿದೆ ಎಂಬುದಕ್ಕೆ ಸದ್ಯ ಖಚಿತ ಪುರಾವೆಗಳು ಲಭ್ಯವಾಗಿಲ್ಲ, ಅರಣ್ಯಾಧಿಕಾರಿಗಳೂ ಇದನ್ನು ದೃಢಪಡಿಸಿಲ್ಲ.
ಹುಲಿ ಓಡಾಟದ ಶಂಕೆಯ ಹಿನ್ನೆಲೆಯಲ್ಲಿ ಕಾಡಂಚಿನ ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮವಾಗಿ ಜೋರಾಗಿ ಬೊಬ್ಬೆ ಹಾಕಿ, ಪಟಾಕಿ ಸಿಡಿಸಿ ಕಾಡಿನತ್ತ ಅಟ್ಟುವ ಪ್ರಯತ್ನ ನಡೆಸಿದ್ದಾರೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಿದರೂ, ಪ್ರಾಥಮಿಕ ತನಿಖೆಯಲ್ಲಿ ಹುಲಿಯ ಹೆಜ್ಜೆ ಗುರುತು ಅಥವಾ ಇತರ ಯಾವುದೇ ಖಚಿತ ಕುರುಹುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಹುಲಿ ಗಣತಿ ಪ್ರಕಾರ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಹುಲಿಗಳಿವೆ. ಇದರಲ್ಲಿ ಎರಡು ಹುಲಿಗಳು ಕುದುರೆಮುಖದ ಮೂಲ ವಾಸಿಗಳಾಗಿದ್ದು, ಉಳಿದ ಎರಡು ಹುಲಿಗಳು ಭದ್ರಾ ಅಭಯಾರಣ್ಯದಿಂದ ವಲಸೆ ಬಂದಿರುವುದಾಗಿ ಅರಣ್ಯ ಇಲಾಖೆ ತಿಳಿಸಿದೆ. ಹುಲಿಗಳು ನೂರಾರು ಕಿಲೋಮೀಟರ್ ದೂರ ಸಂಚರಿಸುವುದು ಸಾಮಾನ್ಯ; ಹಿಂದೆ ನಾಗರಹೊಳೆಯಿಂದ ಅಂಕೋಲವರೆಗೆ ಹುಲಿಯೊಂದು ಪ್ರಯಾಣ ಬೆಳೆಸಿದ್ದನ್ನು ಇಲಾಖೆ ಟ್ರ್ಯಾಕ್ ಮಾಡಿದ್ದ ಉದಾಹರಣೆಯೂ ಇದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಪ್ರಸ್ತುತ ಹುಲಿಗಳ ‘ಸಂಗಾತಿ ಹುಡುಕಾಟ’ದ ಸೀಸನ್‌ ಆಗಿರುವುದರಿಂದ ಆಹಾರ ಹಾಗೂ ಸಂಗಾತಿಗಾಗಿ ಹೊಸ ಪ್ರದೇಶಗಳಿಗೆ ಅವು ಓಡಾಡುವುದು ಸಹಜ. ಈ ಭಾಗದ ವಾಲಿಕುಂಜ ಪ್ರದೇಶವು ಹುಲಿಗಳ ಪ್ರಮುಖ ಆವಾಸಸ್ಥಾನಗಳಲ್ಲಿ ಒಂದಾಗಿರುವುದರಿಂದ, ಸಮೀಪದ ಕಾಡುಗಳಲ್ಲಿ ಹುಲಿ ಸಂಚಾರದ ಸಾಧ್ಯತೆಯನ್ನು ಸಂಪೂರ್ಣ ತಳ್ಳಿ ಹಾಕಲಾಗದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಆದರೂ, ಇದನ್ನು ಖಚಿತಪಡಿಸಲಾಗಿಲ್ಲ.

ಹುಲಿ ಓಡಾಟದ ಕುರಿತು ದೂರುಗಳು ಕೇಳಿಬಂದಿದ್ದರೂ, ಇದುವರೆಗೆ ಯಾವುದೇ ಸ್ಪಷ್ಟ ಸಾಕ್ಷ್ಯ ದೊರಕಿಲ್ಲ. ಈ ಭಾಗದಲ್ಲಿ ಹಿಂದಿನಿಂದಲೂ ಹುಲಿಗಳಿಂದ ಮಾನವರಿಗೆ ತೊಂದರೆ ಉಂಟಾದ ಪ್ರಕರಣಗಳಿಲ್ಲ. ಅರಣ್ಯ ಇಲಾಖೆ ಗಸ್ತು ಸಿಬಂದಿ ನಿರಂತರ ಕಣ್ಗಾವಲು ಇರಿಸಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಆದರೆ, ಕಾಡಂಚಿನ ನಿವಾಸಿಗಳು ಸಂಜೆ ಹಾಗೂ ರಾತ್ರಿ ವೇಳೆ ಎಚ್ಚರಿಕೆ ವಹಿಸಬೇಕು ಎಂದು ಸತೀಶ್, ಎಸಿಎಫ್‌, ಕಾರ್ಕಳ–ಕುದುರೆಮುಖ ವನ್ಯಜೀವಿ ವಿಭಾಗ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles