ಉಡುಪಿ: ಕಾರ್ಕಳ ಉಪವಿಭಾಗದ ನೂತನ ಪೊಲೀಸ್ ಉಪಾಧೀಕ್ಷಕರಾಗಿ (ಡಿವೈಎಸ್‌ಪಿ) ಎಸ್. ವಿಜಯ್ ಪ್ರಸಾದ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. 1998ರಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಆರಂಭಿಸಿದ ಅವರು ದಾವಣಗೆರೆ, ಭದ್ರಾವತಿ ಹಾಗೂ ಚಿಕ್ಕಮಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2007ರಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಪದೋನ್ನತಿ ಪಡೆದ ಅವರು ಹಾಸನ, ಹೊಳೆನರಸೀಪುರ, ಕುಶಾಲನಗರ, ಚಿಕ್ಕಮಗಳೂರು ಹಾಗೂ ಅಂಕೋಲಾ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಈ ಹಿಂದೆ ಕಾರ್ಕಳದಲ್ಲೂ ಸೇವೆ ಸಲ್ಲಿಸಿದ್ದ ಅವರು ಬಳಿಕ ಕಾರವಾರ ಡಿ.ಸಿ.ಆರ್.ಬಿ ವಿಭಾಗಕ್ಕೆ ವರ್ಗಾವಣೆಗೊಂಡಿದ್ದರು. ಅನಂತರ ಬಂಟ್ವಾಳ ಡಿವೈಎಸ್‌ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಇದೀಗ ಪುನಃ ಕಾರ್ಕಳ ಉಪವಿಭಾಗದ ಡಿವೈಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮಂಗಳೂರು ಲೋಕಾಯುಕ್ತ ವಿಭಾಗದಲ್ಲಿಯೂ ಕೆಲವು ವರ್ಷ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.

ಉಡುಪಿ ಜಿಲ್ಲೆಯ ಕೋಟ ಸಮೀಪದ ಗುಂಡ್ಮಿಯ ನಿವಾಸಿಯಾಗಿರುವ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹೆಚ್ಚಿನ ಗಮನ ಹರಿಸುವುದಾಗಿ ತಿಳಿಸಿದ್ದಾರೆ.



