ಉಡುಪಿ : ತಡರಾತ್ರಿ ಮನೆಗೆ ನುಗ್ಗಿ ಮನೆಯವರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ಕೊಟ್ಟಿಗೆಯಲ್ಲಿದ್ದ ಮೂರು ದನವನ್ನು ಕಳ್ಳತನ ಮಾಡಿದ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ಭಾನುವಾರ ತಡರಾತ್ರಿ ಶಿರ್ಲಾಲಿನ ಜಯಶ್ರೀ ಎಂಬ ಮಹಿಳೆಯ ಮನೆಗೆ ಗೋಕಳ್ಳರು ನುಗ್ಗಿದ್ದಾರೆ. ರಾತ್ರಿ ವೇಳೆ ಮಹಿಳೆ ಒಂಟಿಯಾಗಿದ್ದಾರೆ ಎನ್ನುವ ಮಾಹಿತಿ ತಿಳಿದು ವಾಹನವೊಂದರಲ್ಲಿ ಬಂದಿದ್ದ ದನಕಳ್ಳರು ದನ ಹಟ್ಟಿಗೆ ನುಗ್ಗಿದ್ದಾರೆ. ಈ ವೇಳೆ ಶಬ್ದಕ್ಕೆ ಎಚ್ಚೆತ್ತ ಮಹಿಳೆ ಹೊರಗೆ ಬಂದಾಗ ಮಾರಕಾಸ್ತ್ರಗಳನ್ನು ತೋರಿಸಿ ಆಕೆಯನ್ನು ಬೆದರಿಸಿ ದನಗಳನ್ನು ಕದ್ದು ಕೊಂಡು ಹೋಗಿದ್ದಾರೆ. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದು ಇಲ್ಲಿ ಐದನೇ ಬಾರಿ ದಾಳಿ ದನ ಕಳವು ನಡೆದ ಪ್ರಕರಣವಾಗಿದೆ.ಶಿರ್ಲಾಲಿನ ಜಯಶ್ರೀ ಅವರು ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರ ಹತ್ತಿರದ ಸಂಬಂಧಿಯಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ದನಕಳ್ಳತನ ನಡೆದಾಗ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಅವರು ಶಿರ್ಲಾಲಿನ ಈ ಮನೆಗೆ ಭೇಟಿ ನೀಡಿದ್ದರು. ಇಲ್ಲಿ ಒಟ್ಟು ಇದುವರೆಗೂ ೧೨ ದನಗಳ್ಳತನವಾಗಿದ್ದು, ಪೊಲೀಸ್ ರು ಏನು ಮಾಡುತ್ತಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
