Monday, March 2, 2026

spot_img

ಕಾರ್ಕಳದಲ್ಲಿ ಗೂಡ್ಸ್ ವಾಹನದಲ್ಲಿ ಕಾರ್ಮಿಕರ ಅಪಾಯಕಾರಿ ಸಾಗಾಟ:ವಾಹನ ಮಾಲಕನಿಗೆ 10 ಸಾವಿರ ದಂಡ..

ಉಡುಪಿ : ಗೂಡ್ಸ್ ವಾಹನದಲ್ಲಿ ಸೆಂಟ್ರಿಂಗ್ ಹಾಗೂ ಸಿಮೆಂಟ್ ಕಾಂಕ್ರೀಟ್ ಮಷೀನ್‌ಗಳೊಂದಿಗೆ ಕೂಲಿ ಕಾರ್ಮಿಕರನ್ನು ಅಪಾಯಕಾರಿಯಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಕಾರ್ಕಳ ನಗರ ಪೊಲೀಸರು ಪತ್ತೆಹಚ್ಚಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಾಹನ ಮಾಲಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಾರ್ಕಳ ನ್ಯಾಯಾಲಯವು ವಾಹನ ಮಾಲಕ ನಾಗಪ್ಪ ಅವರಿಗೆ 10,000 ರೂಪಾಯಿ ದಂಡ ವಿಧಿಸಿದೆ.

ಕಾರ್ಕಳ ತಾಲೂಕು ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಗೂಡ್ಸ್ ವಾಹನಗಳಲ್ಲಿ ಯಂತ್ರೋಪಕರಣಗಳ ಜೊತೆ ಕಾರ್ಮಿಕರನ್ನು ತುಂಬಿಕೊಂಡು ಕೆಲಸದ ಸ್ಥಳಕ್ಕೆ ಕರೆದುಕೊಂಡು ಹೋಗುವುದು ಹಾಗೂ ಕೆಲಸ ಮುಗಿಸಿ ಮರಳಿಸುವುದು ನಿರಂತರವಾಗಿ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯ ಎದುರಾಗುತ್ತಿದೆ. ಈ ಬಗ್ಗೆ ಪೊಲೀಸರು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಕೆಲವು ಕಾಂಟ್ರಾಕ್ಟರ್‌ಗಳು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಮುಂದುವರಿದಿದೆ.ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆಯಿಂದ ಇಂತಹ ವಾಹನಗಳು ರಸ್ತೆಗಳಲ್ಲಿ ಸಂಚರಿಸುವ ಇತರ ವಾಹನಗಳಿಗೆ ಅಡಚಣೆ ಉಂಟುಮಾಡುತ್ತಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಕಾರ್ಕಳ ನಗರ ಪೊಲೀಸರು, ಗೂಡ್ಸ್ ವಾಹನವನ್ನು ಬೆನ್ನಟ್ಟಿ ಪುರಸಭಾ ವ್ಯಾಪ್ತಿಯ ಶಿವತಿಕೆರೆ ಬಳಿ ತಡೆದು ನಿಲ್ಲಿಸಿ ಮುಂದಿನ ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಹಿಂದೆಯೂ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಿರ್ಗಾನ ಗ್ರಾಮದ ಶಾಲಾ ಸಮೀಪ ನಡೆದ ಅಪಘಾತದಲ್ಲಿ, ಗೂಡ್ಸ್ ವಾಹನದಲ್ಲಿದ್ದ ಸಿಮೆಂಟ್ ಕಾಂಕ್ರೀಟ್ ಮಷೀನ್ ಮಗುಚಿ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಇತ್ತೀಚೆಗೆ ಕಾಪು ತಾಲೂಕಿನಲ್ಲೂ ಇದೇ ರೀತಿಯ ಘಟನೆಗಳು ಸಂಭವಿಸಿರುವುದು ಆತಂಕ ಮೂಡಿಸಿದೆ. ಜಿಲ್ಲೆಯಾದ್ಯಂತ ಗೂಡ್ಸ್ ವಾಹನಗಳಲ್ಲಿ ಕಾರ್ಮಿಕರ ಅಪಾಯಕಾರಿ ಸಾಗಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಕಾರ್ಕಳ ಮಾದರಿಯಲ್ಲಿ ಎಲ್ಲಾ ತಾಲೂಕುಗಳಲ್ಲೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles