ಉಡುಪಿ : ಪಡುಬಿದ್ರಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮಂಗಳೂರಿನ ಯುವ ಉದ್ಯಮಿ ಗೌಜಿ ಇವೆಂಟ್ಸ್ ಮಾಲಿಕ ಅಭಿಷೇಕ್ ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆ ರಾತ್ರಿ 2 ಗಂಟೆ ಸುಮಾರಿಗೆ ಎರ್ಮಾಳು ತೆಂಕ ಸೇತುವೆ ಬಳಿ ಈ ಅಪಘಾತ ನಡೆದಿದೆ.

ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರನ್ನು ಅಭಿಷೇಕ್ ಅವರು ಸ್ವತಃ ಒಬ್ಬರೆ ಚಾಲನೆ ಮಾಡುತ್ತಿದ್ದರು. ಆದರೆ, ಹಿಂದಿನಿಂದ ಅವರ ಗೆಳೆಯರು ಪ್ರತ್ಯೇಕ ವಾಹನಗಳಲ್ಲಿ ಬರುತ್ತಿದ್ದರೆಂದು ಮೂಲಗಳು ತಿಳಿಸಿವೆ.

ಎರ್ಮಾಳು ತೆಂಕ ಪ್ರದೇಶಕ್ಕೆ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ತೋಟಕ್ಕೆ ಉರುಳಿದೆ, ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಆ ಸಮಯದಲ್ಲಿ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಇರದ ಕಾರಣ ಮತ್ತೊಂದು ದೊಡ್ಡ ಅನಾಹುತ ತಪ್ಪಿದಂತಾಗಿದೆ, ಇಲ್ಲವಾದರೆ ಕಂಬ ಕಿತ್ತು ಬಿದ್ದು ಹೆಚ್ಚಿನ ಹಾನಿಯ ಸಂಭವವಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಅಪಘಾತದ ಬಳಿಕ ಗಂಭೀರವಾಗಿ ಗಾಯಗೊಂಡ ಅಭಿಷೇಕ್ ಅವರನ್ನು ಸ್ಥಳೀಯರ ಸಹಾಯದಿಂದ ಅವರ ಸ್ನೇಹಿತರು ಮುಕ್ಕಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ನಂತರ ಮೃತಪಟ್ಟರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ತನಿಖೆ ಮುಂದುವರಿಸಿದ್ದಾರೆ.



