ಉಡುಪಿ: ದಾಂಪತ್ಯ ಸಮಸ್ಯೆಗೆ ಸಮಾಲೋಚನೆಗಾಗಿ ಬಂದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ, ಕಾಪು ಪೊಲೀಸರು ಆಪ್ತ ಸಮಾಲೋಚಕರೋರ್ವರನ್ನು ನವೆಂಬರ್ 15ರ ಸಂಜೆ ಬಂಧಿಸಿದ್ದಾರೆ. ಬಂಧಿತ ಆರೋಪಿ ಮಲ್ಲಾರು ಗ್ರಾಮದ ನಿರಂಜನ ಶೇಖರ ಶೆಟ್ಟಿ (52) ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಮಹಿಳೆಯೊಬ್ಬರು ದಾಂಪತ್ಯ ಸಮಸ್ಯೆ ಪರಿಹಾರಕ್ಕಾಗಿ ಕಾಪು ತಾಲೂಕಿನ ಮೂಳೂರು ಗ್ರಾಮದ ಕಂಕಣಗುತ್ತು ಕಂಪೌಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುನಂದಾ ವೆಲ್ನೆಸ್ ಸೆಂಟರ್‌ಗೆ ಭೇಟಿ ನೀಡಿದ್ದರು. ಕೌನ್ಸಿಲಿಂಗ್ ವೇಳೆ ಆರೋಪಿ ನಿರಂಜನ ಶೇಖರ ಶೆಟ್ಟಿ, ಸಂತ್ರಸ್ಥೆಯ ಮೇಲೆ ಅನಗತ್ಯ ಶಾರೀರಿಕ ಸ್ಪರ್ಶ ನಡೆಸಿ ಲೈಂಗಿಕ ಕಿರುಕುಳ ನೀಡಿದಂತೆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ಕುರಿತು ಸಂತ್ರಸ್ಥೆ ಕಾಪು ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ಸಲ್ಲಿಸಿದ್ದರಿಂದ, ಪೊಲೀಸರು ಭಾರತ ಸಂಹಿತೆಯ ಸಂಬಂಧಿತ ಕಲಮಗಳಡಿ ಪ್ರಕರಣ ದಾಖಲಿಸಿದ್ದರು. ನಂತರ, ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವದಾ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ಮಾರ್ಗದರ್ಶನದಲ್ಲಿ, ಕಾಪು ಠಾಣೆಯ ಎಸ್ಸೈ ಶುಭಕರ ಹಾಗೂ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿ ಬಂಧಿತನಾಗಿದ್ದಾನೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



