ಉಡುಪಿ: ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ಧೋರಣೆ ನೋಡಿದರೇ, ತಾನು ಕೇವಲ ಸಾಬರಿಂದಲೇ ಅಧಿಕಾರಕ್ಕೆ ಬಂದಿದ್ದೇನೆ, ಅವರಿಗೆ ಮಾತ್ರ ತಾನು ಸಿಎಂ ಎಂಬಂತಿದೆ ಅವರ ವರ್ತನೆ. ಅಹಿಂದದ ಹೆಸರು ಹೇಳಿ ಅಧಿಕಾರಕ್ಕೆ ಬಂದು ಹಿಂದುಳಿದವರನ್ನೇ ಮರೆತಿದ್ದಾರೆ. ಇದು ಜನಪ್ರಿಯ ಸರ್ಕಾರ ಅಲ್ಲ, ಇದು ಜಾಹೀರಾತು ಸರ್ಕಾರ, ಇದು ಅಭಿವೃದ್ಧಿ ಪರವಲ್ಲ, ಅಭಿವೃದ್ಧಿ ಶೂನ್ಯ ಸರ್ಕಾರ, ಇದು ಬಡವರ ಪರವಲ್ಲ, ಬೆಲೆ ಏರಿಸಿ ಬಡವರಿಗೆ ಬರೆ ಎಳೆದ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಅವರು ಗುರುವಾರ ಉಡುಪಿಯಲ್ಲಿ ಬಿಜೆಪಿ ವತಿಯಿಂದ ನಡೆದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡುತಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರ ಜನಪ್ರಿಯ ಸರ್ಕಾರವಲ್ಲ. ಜಾಹಿರಾತಿನ ಸರ್ಕಾರ. ಬಡವರ ಪರ ಸರ್ಕಾರವಲ್ಲ. ಬೆಲೆ ಏರಿಕೆ ಮೂಲಕ ಬಡವರಿಗೆ ಬರೆ ಎಳೆದ ಸರ್ಕಾರ. ಅಭಿವೃದ್ಧಿ ಶೂನ್ಯ ಸರ್ಕಾರ, ಹಿಂದುಳಿದವರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಹಿಂದೆ ಹೋಗುತ್ತಿದ್ದಾರೆ. ಅವರಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬುದಾಗಿ ಭಾವಿಸಿದ್ದಾರೆ ಎಂದರು
ನಮ್ಮ ಜನಾಕ್ರೋಶ ಯಾತ್ರೆ ಯಾವುದೇ ಗಿಮಿಕ್ ಅಲ್ಲ, ಗಿಮಿಕ್ ಮಾಡುವುದಕ್ಕೆ ಈಗ ಯಾವುದೇ ಚುನಾವಣೆಗಳು ನಡೆಯುತ್ತಿಲ್ಲ. ರಾಜ್ಯ ಸರ್ಕಾರ ಬೆಲೆಏರಿಕೆ, ಮುಸಲ್ಮಾನರ ಓಲೈಕೆ, ಎಸ್ಸಿಎಸ್ಟಿ ಅನುದಾನದ ದುರ್ಬಳಕೆ, ಭ್ರಷ್ಟಾಚಾರ ವಿರುದ್ದ ಜನತೆಗೆ ನ್ಯಾಯ ಕೊಡಿಸುವುದೇ ಈ ಯಾತ್ರೆಯ ಉದ್ದೇಶ. ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಬಿಜೆಪಿ ಕಾರ್ಯಕರ್ತರ, ಪತ್ರಕರ್ತರ ಮೇಲೆ ಕೇಸುಗಳನ್ನು ಹಾಕಲಾಗುತ್ತಿದೆ. ಕಾರ್ಯಕರ್ತರು ಪೊಲೀಸ್ ದಬ್ಬಾಳಿಕೆಗೆ ಹೆದರಬೇಕಾಗಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದು ನನ್ನ ಮುಂದೆ ಇರುವ ಸವಾಲು ಮತ್ತು ಗುರಿಯಾಗಿದೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ, ಆಗ ಹಿಟ್ಲರ್ ಸರ್ಕಾರಕ್ಕೆ ಬಡ್ಡಿ ಸಮೇತ ಉತ್ತರ ನೀಡೋಣ ಎಂದರು. ಜನಾಕ್ರೋಶ ಯಾತ್ರೆ ಅಂಗವಾಗಿ ಕಲ್ಸಂಕದಿಂದ ಕಡಿಯಾಳಿ ಬಿಜೆಪಿ ಕಚೇರಿವರೆಗೆ ಮೆರವಣಿಗೆ ನಡೆಯಿತು. ಪ್ರತಿಭಟನಾ ಮೆರವಣಿಗೆಗೆ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಬಿಜೆಪಿ ಧ್ವಜವನ್ನು ನೀಡುವ ಮೂಲಕ ಚಾಲನೆ ನೀಡಿದರು. ಬಿ.ವೈ ವಿಜಯೆಂದ್ರ ಎತ್ತಿಗಾಡಿಯಲ್ಲಿ ಕುಳಿತು ಸ್ವಲ್ಪ ದೂರ ಸಾಗಿ, ನಂತರ ಕಾರ್ಯಕರ್ತರ ಜೊತೆ ಕಾಲ್ನಡಿಗೆಯಲ್ಲಿ ಸಾಗಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಶಾಸಕರಾದ ವಿ.ಸುನಿಲ್ ಕುಮಾರ್, ಯಶ್ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಹರೀಶ್ ಪೂಂಜಾ, ಗುರುರಾಜ ಗಂಟಿಹೊಳೆ, ಸುರೇಶ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಶ್ರೀರಾಮಲು, ಮಂಗಳೂರು ಸಂಸದ ಬ್ರಿಜೇಶ್ ಚೌಟ, ವಿಪ ಸದಸ್ಯರಾದ ರವಿಕುಮಾರ್, ಕಿಶೋರ್ ಕುಮಾರ್ ಪುತ್ತೂರು, ಡಾ.ಧನಂಜಯ ಸರ್ಜಿ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಪಕ್ಷದ ನಾಯಕರಾದ ಉದಯಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ದಿನೇಶ್ ಅಮೀನ್, ಜಿತೇಂದ್ರ ಶೆಟ್ಟಿ, ದೀಪಕ್ ಕುಮಾರ್ ಶೆಟ್ಟಿ, ಸುರೇಶ್ ಶೆಟ್ಟಿ ಗೋಪಾಡಿ, ರಾಜೀವ್ ಕುಲಾಲ್, ನವೀನ್ ನಾಯಕ್, ಪ್ರಭಾಕರ ಪೂಜಾರಿ, ಶಿಲ್ಪಾ ಜಿ. ಸುವರ್ಣ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ ಸ್ವಾಗತಿಸಿದರು, ರೇಶ್ಮಾ ಉದಯ ಶೆಟ್ಟಿ ವಂದಿಸಿದರು, ಪ್ರಸಾದ್ ಶೆಟ್ಟಿ ಕುತ್ಯಾರು ಕಾರ್ಯಕ್ರಮ ನಿರೂಪಿಸಿದರು.

ವಿಪ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಸರ್ಕಾರ ದಲಿತರ ಎಸ್ಟಿಪಿಸಿ ಮತ್ತು ಟಿಎಸ್ಪಿ ಅನುದಾನದಲ್ಲಿ 38,000 ಕೋಟಿ ರೂ. ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ನಮ್ಮ ಜೇಬಿನಿಂದಲೇ ಹಣ ತೆಗೆದು ನಮಗೆ ಕೊಡುವ ಕೆಲಸ ಮಾಡುತ್ತಿದೆ. ಎಸ್ಸಿ, ಎಸ್ಟಿ ಮಕ್ಕಳಿಗೆ 2 ವರ್ಷದಿಂದ ವಿದ್ಯಾರ್ಥಿವೇತನ ನೀಡಿಲ್ಲ. ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ. 4 ಮೀಸಲಾತಿಗೆ ಸಂವಿಧಾನ ಬದಲಾಯಿಸುವ ಮಟ್ಟಕ್ಕೆ ಕಾಂಗ್ರೆಸ್ ಓಲೈಕೆಯಲ್ಲಿ ತೊಡಗಿದೆ. ಕಾಂಗ್ರೆಸ್‌ನವರಿಗೆ ಸರ್ಕಾರದ ಅವಧಿ ಇನ್ನೂ 3 ವರ್ಷ ಇರುವಾಗಲೇ ತಾವು ಮತ್ತೇ ಅಧಿಕಾರಕ್ಕೆ ಖಂಡಿತಾ ಬರುವುದಿಲ್ಲ. ಆದ್ದರಿಂದ ಬೇಕಾದಷ್ಟು ಇಷ್ಟಾಚಾರ, ಭ್ರಷ್ಟಾಚಾರ ನಡೆಸೋಣ ಎಂದು ಹೊರಟಿದ್ದಾರೆ ಎಂದು ಟೀಕಿಸಿದರು.