ಉಡುಪಿ: ಕಲಾ ಪೋಷಣೆ, ಕೌಶಲವೃದ್ಧಿ ಮತ್ತು ಕಲಾ ಸಂಭ್ರಮಾಚರಣೆಯ ಧ್ಯೇಯದೊಂದಿಗೆ ಹಮ್ಮಿಕೊಂಡ ಕಲಾ ಕೌಶಲ್ಯ 2025 ಬೇಸಗೆ ಕಲಾ ಶಿಬಿರವು ಹಲವು ಅರ್ಥದಲ್ಲಿ ವೈಶಿಷ್ಟ್ಯವಾಗಿದೆ. ಮಕ್ಕಳು ಮೊಬೈಲ್ ಮುಂತಾದ ಯಾವ ಗೀಳಿಗೂ ಒಳಗಾಗದೆ ತನ್ಮಯತೆಯೊಂದಿಗೆ ವಿವಿಧ ಕಲಾವಿಷಯಗಳಲ್ಲಿ ಮಗ್ನರಾಗಿರುವುದು ಕಲೆಯ ಮಹತ್ವವನ್ನು ಎತ್ತಿ ತೋರಿಸಿದೆ. ಯಾವುದನ್ನು ಮಾಡಬಾರದೋ ಅದನ್ನು ಇತರರಿಂದ ತಿಳಿದು ಮಾಡಬಾರದನ್ನು ಮಾಡದೇ ಇರುವುದೇ ಕಲಿಕೆಯ ಮುಖ್ಯ ಭಾಗವಾಗಿದೆ. ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಇತಿಮಿತಿಗೊಳಿಸಿ, ಕಲೆ ಮತ್ತು ಸಂಸ್ಕೃತಿಯನ್ನು ಜೀವನ ಶೈಲಿಯಾಗಿ ಮೈಗೂಡಿಸಿಕೊಂಡಾಗ ಅಸಾಧಾರಣ ವ್ಯಕ್ತಿತ್ವವನ್ನು ಬಳಸಿಕೊಳ್ಳಬಹುದು ಎಂದು ಮಾಹೆ ಮಣಿಪಾಲದ ಸಾಂಸ್ಕೃತಿಕ ಸಮಿತಿಯ ಛೇರ್‌ಪರ್ಸನ್ಡಾ ಶೋಭಾ ಕಾಮತ್ ಹೇಳಿದರು.

ಅವರು ಇಂದ್ರಾಳಿಯ ಕಲಾ ತಪಸ್ಸ್ ಸಂಗೀತ ಪಾಠಶಾಲೆಯು ಕಲಾ ಕೌಶಲ್ಯ 2025 ಶೀರ್ಷಿಕೆಯಡಿಯಲ್ಲಿ ಮಕ್ಕಳಿಗಾಗಿ 8 ದಿನಗಳ ಕಾಲ ಏರ್ಪಡಿಸಿದ ಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ರೊ ಸಿಎ ದೇವಾನಂದರವರು ತರಬೇತುದಾರರು ಮತ್ತು ಶಿಬಿರದ ಮುಖ್ಯರೂವಾರಿಗಳನ್ನು ಸಂಮಾನಿಸಿ, ‘ಈ ಕಲಾ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ತಮ್ಮಲ್ಲಿ ಅಡಕವಾಗಿರುವ ಕಲಾ ಪ್ರತಿಭೆಗಳ ಪರಿಚಯವಾಗಿದೆ. ಮಕ್ಕಳು ಇಲ್ಲಿ ಕಂಡುಕೊಂಡ ತಮ್ಮ ಆಯ್ಕೆಯ ಕಲಾಪ್ರತಿಭೆಯನ್ನು ತಪಸ್ಸಿನಂತೆ ಅಭ್ಯಸಿಸಿ ನಿರಂತರ ಅನುಸಂಧಾನದೊಂದಿಗೆ ಇನ್ನಷ್ಟು ಎತ್ತರಕ್ಕೆ ಏರಿಸಿಕೊಂಡು ಮುಂದೆ ಅತ್ಯಂತ ಶ್ರೇಷ್ಠ ಕಲಾವಿದರಾಗಿ ವಿಖ್ಯಾತರಾಗಲು ಸಾಧ್ಯವಿದೆ ಎಂದರು.
ರೋಟರಿ ಉಡುಪಿಯ ನಿಯೋಜಿತ ಅಧ್ಯಕ್ಷರಾದ ರೊ ಸೂರಜ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿ ಸಂಯೋಜಕರನ್ನು ಗೌರವಿಸಿ, ಶುಭಾಶಂಸನೆಗೈದರು. ಇನ್ನೋರ್ವ ಅತಿಥಿ ಶಿಕ್ಷಕ, ಅಂಕಣಕಾರ, ರಾಷ್ಟ್ರೀಯ ತರಬೇತುದಾರದ ರಾಜೇಂದ್ರ ಭಟ್ ಅತಿಥಿಗಳಾಗಿ ಪಾಲ್ಗೊಂಡು ಸಮಾರಂಭವನ್ನು ಸಮನ್ವಯಗೊಳಿಸಿ, ಪಾಲಕರ ಕರ್ತವ್ಯಗಳು ಮತ್ತು ಶಿಬಿರದ ಸಾರ್ಥಕತೆಯ ಕುರಿತು ವಿವರಿಸಿದರು. ಶಿಬಿರಾರ್ಥಿಗಳಾದ ಕು. ಸುನಿಧಿ ಕುಲಕುರ್ಣಿ, ಸ್ಮೃತಿ ತುಂಗ ಮತ್ತು ಆತ್ರೇಯ ರಾವ್ ಶಿಬಿರದ ಅನಿಸಿಕೆಗಳನ್ನು ಹಂಚಿಕೊಂಡರು. ಶಿಬಿರಾರ್ಥಿಗಳ ಪೋಷಕರೆಲ್ಲರ ಪ್ರತಿನಿಧಿಯಾಗಿ ರಾಧಾಕೃಷ್ಣ ಸಾಮಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಆಯೋಜಕರನ್ನು ಶ್ಲಾಘಿಸಿದರು. ತರಬೇತುದಾರರಾದ ಪಿ ವಿ ಭಟ್,
ಯೋಗಗುರು, ಸಂಗೀತ ಗುರುಗಳಾದ ಎಂ ಎಸ್ ಗಿರಿಧರ್, ಕ್ಯಾಲಿಗ್ರಫಿ ಗುರು ಅಪರ್ಣಾ ಯು ಕುತೂಹಲಿ ಶಿಬಿರಾರ್ಥಿಗಳ ಪ್ರತಿಕ್ರಿಯೆಗಳ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಶಿಬಿರ ನಿರ್ದೇಶಕಿ ಶ್ರಾವ್ಯ ಎಸ್ ಬಾಸ್ರಿಯವರು ಕಲಾ ಕೌಶಲ್ಯ ಶಿಬಿರದ ಹಿನ್ನೋಟ, ಒಟ್ಟಾರೆ ನಡೆ ಮತ್ತು ಪಡೆದ ಧನ್ಯತೆಯ ಕುರಿತು ಮಾತನಾಡಿದರು. ಸುಬ್ರಹ್ಮಣ್ಯ ಬಾಸ್ರಿಯವರು ಸ್ವಾಗತಿಸಿ, ವಂದಿಸಿದರು.
ಸಮಾರೋಪ ಸಮಾರಂಭದ ಪೂರ್ವದಲ್ಲಿ ಶಿರಾರ್ಥಿಗಳು ಯೋಗ ಗುರು ಪಿ ವಿ ಭಟ್ ಮಾರ್ಗದರ್ಶನದಲ್ಲಿ ಯೋಗ, ಗುರು ಎಂ ಎಸ್ ಗಿರಿಧರ್ ನಿರ್ದೇಶನದಲ್ಲಿ ಶಿಬಿರದಲ್ಲಿಯೇ ಕಲಿತ ಹಾಡುಗಳ ಗಾಯನ, ನಾಟಕಕಾರ ಅಭಿನವ ಗ್ರೋವರ್ ಮಾರ್ಗದರ್ಶನದಲ್ಲಿ ನಾಟಕದ ತುಣುಕುಗಳ ಅಭಿನಯ, ಫಕೀರ್ ಗೌಡ ಮತ್ತು ವಸುಪ್ರದ ನಿರ್ದೇಶನದಲ್ಲಿ ನೃತ್ಯಗಳನ್ನು ಆಕರ್ಷಕವಾಗಿ
ಅಭಿವ್ಯಕ್ತಿಪಡಿಸಿದರು. ಸಮರೋಪ ಸಮಾರಂಭದ ಬಳಿಕ ಶಿಬಿರಾರ್ಥಿಗಳೇ ರಚಿಸಿದ ಆವೆ ಮಣ್ಣಿನ ಕಲಾಕೃತಿಗಳು, ಮಂಡಲ ಮತ್ತು ಕ್ಯಾಲಿಗ್ರಫಿ ರಚನೆಗಳಲ್ಲದೇ, ಶ್ರಾವ್ಯಾ ಬಾಸ್ರಿಯವರ ವೈವಿಧ್ಯಮಯ ಮಂಡಲ ಕೃತಿಗಳು, ಅಪರ್ಣಾರವರ ಚಿತ್ರಕಲೆಗಳು ಮತ್ತು ಕ್ಯಾಲಿಗ್ರಫಿಗಳ ರಚನೆಗಳನ್ನು ಶಿಬಿರದ ‘ಹಸ್ತ ಚಿತ್ತಾರ’ದಲ್ಲಿ ಸಾರ್ವಜನಿಕ ವೀಕ್ಷಣೆಗೆ ಪ್ರದರ್ಶನದ ಏರ್ಪಾಡು ಮಾಡಲಾಗಿತ್ತು. ಸಮಾರೋಪ ಸಮಾರಂಭದ ಬಳಿಕ ಗುರು ಬನ್ನಂಜೆ ಸಂಜೀವ ಸುವರ್ಣರವರ ನಿರ್ದೇಶನದಲ್ಲಿ ಶಿಬಿರಾರ್ಥಿಗಳಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ಮತ್ತು ಯಕ್ಷ ಸಂಜೀವ ಬಳಗದವರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ಜರುಗಿತು.