ಉಡುಪಿ : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯುತ್ತಿರುವ ಲೋಕಕಲ್ಯಾಣಾರ್ಥ ನವದುರ್ಗಾ ಲೇಖನ ಯಜ್ಞಕ್ಕೆ ಈ ಬಾರಿ ವಿಶಿಷ್ಟ ಆಕರ್ಷಣೆ ದೊರೆತಿದೆ. ಕ್ರಾಂತಿ ವಿದ್ಯಾನಂದ ನಾಯಕ್ ಅವರು ಬರೆದಿರುವ ನವದುರ್ಗಾ ಲೇಖನವನ್ನು ನೇರವಾಗಿ ಓದಲು ಸಾಧ್ಯವಿಲ್ಲ; ಬದಲಿಗೆ ಕನ್ನಡಿಯ ಮೂಲಕ ನೋಡಿದಾಗ ಮಾತ್ರ ಅಕ್ಷರಗಳು ಸರಿಯಾಗಿ ಗೋಚರಿಸುವ ವಿಶೇಷ ವಿಧಾನವನ್ನು ಅವರು ಬಳಸಿದ್ದಾರೆ. ಲೇಖನವನ್ನು ಕನ್ನಡ, ತುಳು, ಇಂಗ್ಲಿಷ್ ಮತ್ತು ಹಿಂದಿ ಸೇರಿ ನಾಲ್ಕು ಭಾಷೆಗಳಲ್ಲಿ ಬರೆಯಲು ಅವಕಾಶವಿದ್ದು, ಕ್ರಾಂತಿ ನಾಯಕ್ ಅವರು ಎಲ್ಲಾ ನಾಲ್ಕು ಭಾಷೆಯಲ್ಲೂ ಇದೇ ವಿನೂತನ ಶೈಲಿಯನ್ನು ಅನುಸರಿಸಿದ್ದಾರೆ. ಕನ್ನಡಿಯ ಪ್ರತಿಬಿಂಬದ ಮೂಲಕ ಓದಬಹುದಾದ ಈ ಲೇಖನವು ಭಕ್ತರ ಕುತೂಹಲಕ್ಕೆ ಕಾರಣವಾಗಿದೆ.

ಈ ಹಿಂದೆ ಇದೇ ರೀತಿಯಲ್ಲಿ ಅವರು ಕೋಟಿ ಗೀತಾ ಲೇಖನ ಯಜ್ಞವನ್ನು ಪೂರ್ಣಗೊಳಿಸಿ, ಜಿನಿಯಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲೂ ಹೆಸರು ದಾಖಲಿಸಿಕೊಂಡಿದ್ದರು. “ಭಕ್ತಿ ಮತ್ತು ಮನಸ್ಸಿದ್ದರೆ ಏನೂ ಅಸಾಧ್ಯವಲ್ಲ; ಅದಕ್ಕೆ ಕ್ರಾಂತಿ ವಿದ್ಯಾನಂದ ನಾಯಕ್ ಅವರು ಬದುಕುಳ್ಳ ಸಾಕ್ಷಿ,ಎಂದು ದೇವಳದ ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಹಾಗೂ ಘಂಟಾನಾದ ಸೇವಾ ಸಮಿತಿಯ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಪ್ರಶಂಸಿಸಿದರು.

ನವದುರ್ಗಾ ಲೇಖನವನ್ನು ಪೂರ್ಣಗೊಳಿಸಿ ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆಯಾದ ಕ್ರಾಂತಿ ನಾಯಕ್ ಅವರಿಗೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅಮ್ಮನ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಹಾಗೂ ಅಭಿವೃದ್ಧಿ ಸಮಿತಿಯಿಂದಲೂ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದೇವಳದ ಅಭಿವೃದ್ಧಿ ಸಮಿತಿಯ ಪ್ರಚಾರ ಸಮಿತಿ ಸಂಚಾಲಕ ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಉಪಸ್ಥಿತರಿದ್ದರು.



