ಉಡುಪಿ: ಮಲ್ಪೆ ಜಾಮಿಯಾ ಮಸೀದಿ ಬಳಿ ಇರುವ ಕಟ್ಟಡದ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತ ದೇಹವೊಂದು ಪತ್ತೆಯಾಗಿದೆ. ಏಪ್ರಿಲ್ 14ರಂದು ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು ಶೌಚಾಲಯದ ಒಳಗಿನ ಗೋಡೆಯ ಮೇಲೆ ರಕ್ತದ ಕಲೆಗಳು ಕೂಡ ಪತ್ತೆಯಾಗಿದೆ. ಶಿಶುವಿನ ಮೃತದೇಹ ಪತ್ತೆಯಾದ ಬಳಿಕ ಮಸೀದಿಯ ವ್ಯವಸ್ಥಾಪಕರು ಮಲ್ಪೆ ಪೊಲೀಸ್ ಠಾಣೆಗೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದಾರೆ.

ಇನ್ನು ಈ ಪ್ರಕರಣದ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ ಕೆ ಅರುಣ್ ಮಾಧ್ಯಮಗಳಿಗೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಶೌಚಾಲಯ ದಲ್ಲಿ ಪತ್ತೆಯಾದ ನವಜಾತ ಶಿಶುವಿನ ಮೃತದೇಹ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಮಗುವಿನ ತಾಯಿಯನ್ನು ಪತ್ತೆಹಚ್ಚಲಾಗಿದೆ. ಕಾಪು ಮೂಲದ ಆಫ್ರಿನಾ ಎನ್ನುವವರಿಗೆ ಈ ಮಗು ಸೇರಿದೆ. ಈಗಾಗಲೇ ಒಂದು ಮಗು ಆಕೆಗೆ ಇದ್ದು ಇನ್ನೊಂದು ಏಳು ಎಂಟು ತಿಂಗಳ ಗರ್ಭವನ್ನು ಯಾವುದೇ ವೈದ್ಯಕೀಯ ನೆರವನ್ನ ಪಡೆದುಕೊಳ್ಳದೆ ಸ್ವತಃ ಗರ್ಭಪಾತ ಮಾಡಿಕೊಳ್ಳಲು ಯತ್ನಿಸಿದ ಪರಿಣಾಮ ಮಲ್ಪೆ ಮಸೀದಿ ಕಟ್ಟಡದ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಜನ್ಮ ನೀಡಿದ ಮಗುವನ್ನು ಆಕೆ ಅಲ್ಲಿಯೇ ಬಿಟ್ಟು ತೆರಳಿರುವುದಾಗಿ ತಿಳಿಸಿರುವ ಅಫ್ರಿನಾ, ಆಸ್ಪತ್ರೆಯಲ್ಲಿ ಪಡೆಯುತ್ತಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಆಕೆಯ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಊಹಾಪೋಹಗಳು ಮತ್ತು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಬಾರದು. ಸುಳ್ಳು ಸುದ್ದಿಯನ್ನು ಹಬ್ಬಿಸಿದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ ಕೆ ಅರುಣ್ ತಿಳಿಸಿದ್ದಾರೆ.


