ಉಡುಪಿ: ಗ್ಯಾಸ್ ತುಂಬಿದ್ದ ಬುಲೆಟ್ ಟ್ಯಾಂಕರ್ವೊಂದು ಕಟಪಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಲ್ಟಿಯಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಘಟನೆ ಸಂಭವಿಸಿದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ನೀರು ಹಾಯಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿದರು.

ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಹಿಂದುಸ್ಥಾನ್ ಪೆಟ್ರೋಲಿಯಂ ಕಂಪನಿಗೆ ಸೇರಿದ ಅನಿಲ ತುಂಬಿದ ಟ್ಯಾಂಕರ್ ಕಟಪಾಡಿ ಜಂಕ್ಷನ್ನಲ್ಲಿ ಪಲ್ಟಿಯಾಗಿದೆ. ಕಟಪಾಡಿ ಜಂಕ್ಷನ್ನಲ್ಲಿ ನಡೆಯುತ್ತಿರುವ ಅಂಡರ್ಪಾಸ್ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆ ಡೈವರ್ಶನ್ ಮಾಡಲಾಗಿದ್ದು, ತಿರುವಿನಲ್ಲಿ ವೇಗವಾಗಿ ಬಂದ ಟ್ಯಾಂಕರ್ ಅನ್ನು ಚಾಲಕ ಏಕಾಏಕಿ ತಿರುಗಿಸಿದ ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಘಟನೆಯ ಬಳಿಕ ಉಡುಪಿ ಅಗ್ನಿಶಾಮಕ ದಳದ ಮೂರು ವಾಹನಗಳು ಸ್ಥಳಕ್ಕೆ ಆಗಮಿಸಿ ಟ್ಯಾಂಕರ್ಗೆ ನಿರಂತರವಾಗಿ ನೀರು ಹಾಯಿಸಿ ತಂಪಾಗಿಡುವ ಕಾರ್ಯ ನಡೆಸಿದವು. ಜೊತೆಗೆ ಇತರ ಟ್ಯಾಂಕರ್ಗಳ ಮೂಲಕವೂ ನೀರನ್ನು ತಂದು ಹಾಯಿಸುವ ಕಾರ್ಯ ಮುಂದುವರಿಯಿತು. ತಜ್ಞರು ಸ್ಥಳಕ್ಕೆ ಆಗಮಿಸಿ ಟ್ಯಾಂಕರ್ನಲ್ಲಿದ್ದ ಅನಿಲವನ್ನು ಬೇರೆ ಟ್ಯಾಂಕರ್ಗೆ ವರ್ಗಾಯಿಸುವ ಕಾರ್ಯ ನಡೆಸಿದರು. ಘಟನಾ ಸ್ಥಳದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಜರಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಒಂದು ಬದಿಯ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಕಟಪಾಡಿಯ ಒಳ ರಸ್ತೆಗಳ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಇದರಿಂದ ಮಂಗಳೂರು–ಉಡುಪಿ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕಾಗಿ ಇಂದು ರಾತ್ರಿ 8 ಗಂಟೆಯವರೆಗೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶಿಸಿದರು. ಮಂಗಳೂರಿನಿಂದ ಉಡುಪಿಗೆ ಹೋಗುವ ವಾಹನಗಳು ಕಾಪುವಿನಿಂದ ಶಿರ್ವಾ – ಮೂಡುಬೆಳ್ಳೆ – ಮಣಿಪುರ ಮಾರ್ಗವಾಗಿ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಉಡುಪಿಗೆ ಹೋಗಬೇಕು. ಅಥವಾ ಪಡುಬಿದ್ರೆ – ಬೆಳ್ಮಣ್ – ಶಿರ್ವಾ ಮಾರ್ಗವಾಗಿ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಉಡುಪಿಗೆ ತಲುಪಬೇಕು. ಅದೇ ರೀತಿ ಉಡುಪಿಯಿಂದ ಮಂಗಳೂರಿಗೆ ತೆರಳುವ ವಾಹನಗಳು ಮಣಿಪಾಲದಿಂದ ಮಣಿಪುರ – ಮೂಡುಬೆಳ್ಳೆ – ಶಿರ್ವಾ ಮಾರ್ಗವಾಗಿ ಕಾಪು ತಲುಪಿ ಅಲ್ಲಿಂದ ಮಂಗಳೂರು ಕಡೆಗೆ ತೆರಳಬೇಕು. ಅಥವಾ ಮಣಿಪಾಲದಿಂದ ಶಿರ್ವಾ – ಬೆಳ್ಮಣ್ ಮಾರ್ಗವಾಗಿ ಪಡುಬಿದ್ರಿ ತಲುಪಿ ಅಲ್ಲಿಂದ ಮಂಗಳೂರು ಕಡೆಗೆ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿತ್ತು.




