ಉಡುಪಿ: ಪ್ರತಿಯೊಬ್ಬ ನಾಗರಿಕರಿಗೂ ಹುಟ್ಟಿನಿಂದ ಕೊನೆಯವರೆಗೂ ಜೀವನದ ಪ್ರತಿಯೊಂದು ಹಂತದಲ್ಲಿಯೂ ಸರ್ಕಾರದ ದಾಖಲೆಗಳನ್ನು ಹೊಂದುವುದು ಅನಿವಾರ್ಯವಾಗಿದ್ದು, ಅದರಲ್ಲೂ ವಿಶೇಷವಾಗಿ ಕಂದಾಯ ಇಲಾಖೆಯ ದಾಖಲೆಗಳು, ಜನನದಿಂದ ಮರಣದವರೆಗೂ ಕಂದಾಯ ಸೇವೆಗಳು ಅತ್ಯವಶ್ಯಕ. ಭೂ ದಾಖಲೆಗಳು ಜನರಿಗೆ ಭೂ ಮಾಲೀಕತ್ವಕ್ಕೆ ಕೈಗನ್ನಡಿಯಾಗಿವೆ. ಈ ದಾಖಲೆಗಳ ನಿರ್ವಹಣೆಯಲ್ಲಿ ದಕ್ಷತೆ, ಪಾರದರ್ಶಕತೆ, ನಿಖರತೆಯನ್ನು ವೃದ್ಧಿಸುವ ಗುರಿಯನ್ನು ಸರ್ಕಾರ ಹೊಂದುವುದರೊಂದಿಗೆ ಭೂ ಗ್ಯಾರಂಟಿ ಕಂದಾಯ ಸೇವೆಗಳ ಸುಧಾರಣೆ ಜಾರಿಗೆ ತಂದಿದೆ. ಭೂ ಸುರಕ್ಷಾ ಯೋಜನೆಯಡಿ ಹಲವು ವರ್ಷಗಳಿಂದ ಕಗ್ಗಂಟ್ಟಿಗೆ ಸಿಲುಕಿರುವ ಹಳೆಯ ದಾಖಲೆಗಳನ್ನು ಈ ಯೋಜನೆಯಡಿ ಡಿಜಿಟಲೀಖರಣಗೊಳಿಸುವುದರೊಂದಿಗೆ ಸುರಕ್ಷಿತಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.
ಭೂಸುರಕ್ಷಾ ಯೋಜನೆಯಡಿಯಲ್ಲಿ ರಾಜ್ಯದ ಎಲ್ಲಾ ತಾಲೂಕು ಕಚೇರಿಗಳ ಅಭಿಲೇಖಾಲಯಗಳಲ್ಲಿರುವ ಅತ್ಯಂತ ಪ್ರಮುಖವಾದ, ಹಳೆಯ ಅವಧಿಯ ಭೂದಾಖಲೆಗಳನ್ನು ಇಂಡೆಕ್ಸಿಂಗ್, ಕ್ಯಾಟಲಾಗಿಂಗ್ ಸ್ಕ್ಯಾನಿಂಗ್ ಮತ್ತು ಅಪ್‌ಲೋಡಿಂಗ್ ಮಾಡಿ ಗಣಕೀಕರಣಗೊಳಿಸಲಾಗುತ್ತಿದೆ. ಭೂಮಿ ಉಸ್ತುವಾರಿ ಕೋಶದಿಂದ ಕಂದಾಯ ದಾಖಲೆಗಳ ಗಣಕೀಕರಣ ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ತಾಲೂಕು ಕಚೇರಿಗಳ ಅಭಿಲೇಖಾಲಯಗಳಲ್ಲಿರುವ ಕಡತಗಳನ್ನು ಡಿಜಿಟಲೀಕರಣ ಮಾಡುವ ಕಾರ್ಯವು ಈಗಾಗಲೇ ನಡೆಯುತ್ತಿದೆ.
ಜಿಲ್ಲೆಗೆ ಸಂಬಂಧಿಸಿದಂತೆ ಅಭಿಲೇಖಾಲಯದ ದಾಖಲೆಗಳನ್ನು ಗಣಕೀಕರಣಗೊಳಿಸುವ ಬಗ್ಗೆ ಹೆಬ್ರಿ ತಾಲೂಕು ಕಚೇರಿಯನ್ನು ಪೈಲಟ್ ತಾಲೂಕು ಆಗಿ ಆಯ್ಕೆ ಮಾಡಲಾಗಿದ್ದು, ಒಟ್ಟು 40,832 ಕಡತ/ದಾಖಲೆಗಳ 26,82,228 ಪುಟಗಳನ್ನು ಭೂಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ ಗಣಕೀಕರಣ ಎಂಬ ತಂತ್ರಾಂಶದ ಮೂಲಕ ಡಿಜಿಟಲೀಕರಣ ಮಾಡಲಾಗಿರುತ್ತದೆ. ಉಳಿದಂತೆ ಉಡುಪಿ ತಾಲೂಕಿನಲ್ಲಿ 7,660 ಕಡತಗಳ 14,57,695 ಪುಟಗಳನ್ನು, ಕುಂದಾಪುರ ತಾಲೂಕಿನ 7,969 ಕಡತಗಳ 11,92,326 ಪುಟಗಳನ್ನು, ಕಾರ್ಕಳ ತಾಲೂಕಿನ 7,024 ಕಡತಗಳ 12,75,607 ಪುಟಗಳನ್ನು, ಬ್ರಹ್ಮಾವರ ತಾಲೂಕಿನ 8,301 ಕಡತಗಳ 11,83,820 ಪುಟಗಳನ್ನು, ಬೈಂದೂರು ತಾಲೂಕಿನ 6,082 ಕಡತಗಳ 9,49,531 ಪುಟಗಳನ್ನು ಹಾಗೂ ಕಾಪು ತಾಲೂಕಿನ 8,611 ಕಡತಗಳ 12,97,712 ಪುಟಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 86,476 ಕಡತ/ದಾಖಲೆಗಳನ್ನು ಹಾಗೂ 1,00,38,919 ಪುಟಗಳನ್ನು ಈಗಾಗಲೇ ಕಂದಾಯ ದಾಖಲೆಗಳ ಗಣಕೀಕರಣ ತಂತ್ರಾಶದಲ್ಲಿ ಅಪ್ಲೋಡ್ ಮಾಡಲಾಗಿರುತ್ತದೆ.
ಮೇಲ್ಕಂಡ ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕರು ಅಭಿಲೇಖಾಲಯದ ದೃಡೀಕೃತ ದಾಖಲೆಗಳನ್ನು ಜೂನ್ 2025 ರಿಂದ ಆನ್‌ಲೈನ್ ಮೂಲಕ ಸ್ವತಃ ತಾವೇ ಪಡೆಯಬಹುದು ಅಥವಾ ಅಭಿಲೇಖಾಲಯಗಳಿಗೆ ಭೇಟಿ ನೀಡಿಯೂ ಸಹ ಡಿಜಿಟಲ್ ದಾಖಲೆಗಳನ್ನು ನಿಗದಿತ ಶುಲ್ಕ ಪಾವತಿಸಿ ನಿಗದಿತ ಕಾಲಮಿತಿಯೊಳಗೆ ಸುಲಭವಾಗಿ ಪಡೆಯಬಹುದಾಗಿದೆ. ಇದರ ಸದುಪಯೋಗವನ್ನು ಜಿಲ್ಲೆಯ ಎಲ್ಲಾ ಸಾರ್ವಜನಿಕರು ಪಡೆಯಬಹುದಾಗಿದೆ.