Saturday, February 7, 2026

spot_img

ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಶೀರೂರು ಪರ್ಯಾಯ – 2026

ಉಡುಪಿ: ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥರು ಶ್ರೀಕೃಷ್ಣನ ಪೂಜಾ ಕೈಂಕರ್ಯ ಹಾಗೂ ಸರ್ವಜ್ಞ ಪೀಠಾರೋಹಣ ಮಾಡಿದ ಅತ್ಯಂತ ಕಿರಿಯ ಯತಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾದ ಶೀರೂರು ಪರ್ಯಾಯ ಮಹೋತ್ಸವವು ಭಕ್ತಿಭಾವ ಮತ್ತು ಅದ್ಧೂರಿ ಸಂಭ್ರಮದೊಂದಿಗೆ ನೆರವೇರಿತು.

ನಸುಕಿನ ಜಾವ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಜೋಡುಕಟ್ಟೆಯಿಂದ ಆರಂಭವಾದ ವೈಭವದ ಪರ್ಯಾಯ ಮೆರವಣಿಗೆ ಅಪೂರ್ವ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಯಿತು. ಇದಕ್ಕೂ ಮುನ್ನ ವೇದವರ್ಧನ ತೀರ್ಥರು ದಂಡತೀರ್ಥದಲ್ಲಿ ಪವಿತ್ರ ಸ್ನಾನಗೈದು ಜೋಡುಕಟ್ಟೆಗೆ ಆಗಮಿಸಿದರು. ಬಳಿಕ ಮೆರವಣಿಗೆಯೊಂದಿಗೆ ಉಡುಪಿಗೆ ಪ್ರವೇಶಿಸಿದ ಅವರು ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣ ದರ್ಶನ ಪಡೆದರು.

ಅನಂತರ ಪುತ್ತಿಗೆ ಮಠಾಧೀಶರು ಶೀರೂರು ಶ್ರೀಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು ಅಕ್ಷಯ ಸೌಟು ಹಾಗೂ ಮಠದ ಕೀಲಿಕೈ ಹಸ್ತಾಂತರಿಸಿದರು. ಶ್ರೀ ಕೃಷ್ಣ–ಮುಖ್ಯಪ್ರಾಣರ ದರ್ಶನ ಪಡೆದ ಬಳಿಕ ಯತಿಗಳು ಬಡಗುಮಾಳಿಗೆಯಲ್ಲಿ ನಡೆದ ಸಾಂಪ್ರದಾಯಿಕ ಅರಳುಗದ್ದಿಗೆ ದರ್ಬಾರ್‌ನಲ್ಲಿ ಭಾಗವಹಿಸಿದರು.

ಸರ್ವಜ್ಞ ಪೀಠವೇರಿದ ವೇದವರ್ಧನ ತೀರ್ಥರೊಂದಿಗೆ ಕೃಷ್ಣಾಪುರ, ಪಲಿಮಾರು, ಪೇಜಾವರ, ಕಾಣಿಯೂರು, ಸೋದೆ ಹಾಗೂ ಅದಮಾರು ಮಠಾಧೀಶರು ದರ್ಬಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್‌ನಲ್ಲಿ ದೇಶದ ವಿವಿಧ ಭಾಗಗಳ ಗಣ್ಯರು ಪಾಲ್ಗೊಂಡಿದ್ದು, ಡಾ. ವೀರೇಂದ್ರ ಹೆಗ್ಗಡೆ, ಯದುವೀರ ದತ್ತ ಒಡೆಯರ್ ಸೇರಿದಂತೆ ಹಲವು ಕ್ಷೇತ್ರಗಳ ಪ್ರತಿನಿಧಿಗಳು ಸಾಕ್ಷಿಯಾದರು.

ದರ್ಬಾರ್ ಕಾರ್ಯಕ್ರಮದ ಬಳಿಕ ಶೀರೂರು ಶ್ರೀಗಳು ತಮ್ಮ ಪ್ರಥಮ ಪರ್ಯಾಯದ ಮೊದಲ ಶ್ರೀ ಕೃಷ್ಣ ಪೂಜೆಯನ್ನು ನೆರವೇರಿಸಿದರು. ಈ ಬಾರಿ ಹಿಂದಿನ ಪರ್ಯಾಯಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿದ್ದು, ಶೀರೂರು ಪರ್ಯಾಯ–2026 ಇತಿಹಾಸದಲ್ಲೊಂದು ವಿಶಿಷ್ಟ ಅಧ್ಯಾಯವಾಗಿ ದಾಖಲಾಗಿತು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles