ಉಡುಪಿ: ಉಡುಪಿಯ ಕುತ್ಪಾಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪಂಚಕರ್ಮ ಸ್ನಾತಕೋತ್ತರ ವಿಭಾಗದ ವತಿಯಿಂದ ವೈದ್ಯರಿಗೆ ಮೂರು ದಿನಗಳ ಪಂಚಕರ್ಮ ಪ್ರಾಯೋಗಿಕ ತರಬೇತಿ ಶಿಬಿರ ನಡೆಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ಶಿಬಿರಕ್ಕೆ ಚಾಲನೆ ನೀಡಲಾಯಿತು. ಉಪಪ್ರಾಂಶುಪಾಲರು ಹಾಗೂ ಪಂಚಕರ್ಮ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ನಿರಂಜನ್ ರಾವ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ, ಉಪ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಹಾಗೂ ಹಿರಿಯ ವೈದ್ಯ ಡಾ. ನಿಶಾಂತ್ ಪೈ ಉಪಸ್ಥಿತರಿದ್ದರು. ಪಂಚಕರ್ಮ ವಿಭಾಗದ ಸಹಪ್ರಾಧ್ಯಾಪಕ ಡಾ. ಮಂಜುನಾಥ ಕಂಠಿ ಸ್ವಾಗತಿಸಿ, ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ 30 ಮಂದಿ ವೈದ್ಯರು ಭಾಗವಹಿಸಿದ್ದು, ಡಾ. ನಿಶಾಂತ್ ಪೈ, ಡಾ. ನಿರಂಜನ್ ರಾವ್, ಪ್ರಾಧ್ಯಾಪಕರಾದ ಡಾ. ರಾಜಲಕ್ಷ್ಮಿ, ಡಾ. ಪದ್ಮ ಕಿರಣ್ ಹಾಗೂ ಸಹಪ್ರಾಧ್ಯಾಪಕರಾದ ಡಾ. ಮಂಜುನಾಥ ಕಂಠಿ ಮತ್ತು ಡಾ. ತುಳಸಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡರು.



