ಉಡುಪಿ : ಯಕ್ಷಗಾನ ಕಲಾರಂಗದಲ್ಲಿ ಮೂರುವರೆ ದಶಕಗಳ ಕಾಲ ಕಾರ್ಯಕರ್ತರಾಗಿ, ಜೊತೆಕಾರ್ಯದರ್ಶಿಯಾಗಿ ಸೇವೆಸಲ್ಲಿಸಿ ಇತ್ತೀಚೆಗೆ ನಮ್ಮನ್ನಗಲಿದ ಸಾಮಾಜಿಕ ಕಾರ್ಯಕರ್ತ, ನಿವೃತ್ತ ಶಿಕ್ಷಕ ಎಚ್. ಎನ್. ಶೃಂಗೇಶ್ವರರ ಶೃದ್ಧಾಂಜಲಿ ಸಭೆಯು ಐವೈಸಿ ಸಭಾಭವನದಲ್ಲಿ ಇಂದು ಜರಗಿತು. ಪ್ರೊ. ಎಂ. ಎಲ್. ಸಾಮಗರು ಶೃಂಗೇಶ್ವರರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿ, ನುಡಿನಮನವನ್ನು ಆರಂಭಿಸಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷ ಎಸ್. ವಿ. ಭಟ್, ಭುವನಪ್ರಸಾದ್ ಹೆಗ್ಡೆ, ನಾರಾಯಣ ಎಂ. ಹೆಗಡೆ, ಮಂಜುನಾಥ ಹೆಬ್ಬಾರ್ ಅವರ ಒಡನಾಟದ ನೆನಪನ್ನು ಹಂಚಿಕೊಂಡರು.

ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯ ಹಾಗೂ ಸುಬ್ರಹ್ಮಣ್ಯ ಭಟ್, ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಕೆ. ಗಣೇಶ್ ರಾವ್, ಉಪಾಧ್ಯಕ್ಷ ಪಿ. ಕಿಶನ್ ಹೆಗ್ಡೆ ಹಾಗೂ ಉಡುಪಿಯ ಅನೇಕ ಗಣ್ಯರಿದ್ದ ಈ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಅವರ ಒಡನಾಡಿಗಳಾದ ಮಧುಕೇಶ್ವರ ಹೆಗಡೆ, ಡಾ.ಅಮೃತೇಶ್, ಡಾ. ಟಿ. ಎಸ್. ರಮೇಶ್, ವಾಸುದೇವ ಭಟ್ ಪೆರಂಪಳ್ಳಿ, ನಿಟ್ಟೂರು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಅನಸೂಯ, ಶ್ರೀಪತಿ ರಾವ್ ಅವರೊಂದಿಗಿನ ತಮ್ಮ ಸಂಬಂಧ ಮತ್ತು ಅವರ ವಿಶಿಷ್ಟ ವ್ಯಕ್ತಿತ್ವವನ್ನು ನೆನಪಿಸಿಕೊಂಡು ಶ್ರದ್ಧಾಂಜಲಿ ಸಮರ್ಪಿಸಿದರು. ಆರಂಭದಲ್ಲಿ ಅವರ ಶಿಷ್ಯೆ ಡಾ. ಪ್ರತಿಮಾ ಆಚಾರ್ಯ ಅವರ ಕುರಿತು ಬರೆದ ಕವನದ ಪ್ರಾರ್ಥನೆ ಹಾಡಿದರು. ನಟರಾಜ್ ಪಟ್ಲ ಅವರು ಡಾ.ರಾಘವೇಂದ್ರ ರಾವ್ ಅವರು ಶೃಂಗೇಶ್ವರರ ನಿಧನದ
ಸಂದರ್ಭದಲ್ಲಿ ಬರೆದ ಕವನವನ್ನು ಹಾಡಿದರು. ಶೃಂಗೇಶ್ವರರ ಕುರಿತ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಮುರಲಿ ಕಡೆಕಾರ್ ನಿರೂಪಿಸಿದರು. ಈ ಸಂದರ್ಭದಲ್ಲಿ ಶೃಂಗೇಶ್ವರರ ಪತ್ನಿ ವಾಣಿಶ್ರೀ, ಮಕ್ಕಳು ಕುಟುಂಬದ ಬಂಧುಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಯಕ್ಷಗಾನ ಕಲಾರಂಗದ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಅಗಲಿದ ಚೇತನಕ್ಕೆ
ಒಂದು ನಿಮಿಷದ ಮೌನ ಶ್ರದ್ಧಾಂಜಲಿ ಸಮರ್ಪಿಸಲಾಯಿತು.


