ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರಿನಲ್ಲಿ ಸೆಪ್ಟೆಂಬರ್ 27ರಂದು ನಡೆದ ಎಕೆಎಂಎಸ್ ಬಸ್ ಮಾಲಕ ಸೈಫ್ ಯಾನೆ ಸೈಯಿಪುದ್ದಿನ್ ಆತ್ರಾಡಿ ಹತ್ಯೆ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ (ಕೋಕಾ) ಸೆಕ್ಷನ್ 3ರಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಪ್ರಕರಣದ ಆರೋಪಿಗಳಾದ ಉಡುಪಿ ಮಿಷನ್ ಕಂಪೌಂಡ್ ನಿವಾಸಿ ಮುಹಮ್ಮದ್ ಫೈಸಲ್ ಖಾನ್ (27), ಕರಂಬಳ್ಳಿ ನಿವಾಸಿ ಮುಹಮ್ಮದ್ ಶರೀಫ್ (37), ಕೃಷ್ಣಾಪುರದ ಅಬ್ದುಲ್ ಶುಕೂರ್ (43), ಫೈಸಲ್ ಖಾನ್ ಪತ್ನಿ ರಿಧಾ ಶಭನಾ (27) ಹಾಗೂ ಮಾಲಿ ಮುಹಮ್ಮದ್ ಸಿಯಾನ್ (31) ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡ ಆರೋಪಿ ಸೇರಿದಂತೆ ಎಲ್ಲಾ ಆರು ಆರೋಪಿಗಳ ಮೇಲೂ ಕೋಕಾ ಕಾಯಿದೆಯ ಸೆಕ್ಷನ್ 3 ಅಳವಡಿಸಲಾಗಿದೆ. ಕೋಕಾ ಕಾಯಿದೆಯಡಿ ಪ್ರಕರಣ ದಾಖಲಾದಲ್ಲಿ, ಅಪರಾಧದಲ್ಲಿ ಭಾಗಿಯಾದ ಎಲ್ಲ ಆರೋಪಿಗಳ ಅಕ್ರಮ ಸಂಪಾದನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.



