ಬೈಂದೂರು : ಮೀನುಗಾರಿಕೆಗೆ ತೆರಳಿದ್ದ ದೋಣಿ ಸಮುದ್ರದ ಭಾರಿ ಅಲೆ ಹೊಡೆತಕ್ಕೆ ಸಿಲುಕಿ ಪಲ್ಟಿಯಾದ ಘಟನೆ ಬೈಂದೂರು ತಾಲೂಕಿನ ಉಪ್ಪುಂದ ಮಡಿಕಲ್ ಎಂಬಲ್ಲಿ ನಡೆದಿದೆ. ಅದೃಷ್ಟವಶಾತ್ ದೋಣಿಯಲ್ಲಿದ್ದ 9 ಮೀನುಗಾರರು ಲೈಫ್ ಜಾಕೇಟ್ ಧರಿಸಿದ್ದರಿಂದ ಅಪಾಯದಿಂದ ಪಾರಾಗಿ ದಡ ಸೇರಿದ್ದಾರೆ.

ಉಪ್ಪುಂದ ಮೂಲದ ಚಂದ್ರ ಖಾರ್ವಿ, ಪ್ರಮೋದ್, ಪ್ರಜ್ವಲ್, ಗೌತಮ್, ಭಾಸ್ಕರ, ಯೋಗಿರಾಜ್, ಗೋವಿಂದ, ಬಾಬು ಖಾರ್ವಿ, ದೀಪಕ್ ಅಪಾಯ ದಿಂದ ಪಾರಾದ ಮೀನುಗಾರರು. ಉಪ್ಪುಂದ ಶಾರದಾ ಖಾರ್ವಿ ಎಂಬವರ ಮಾಲೀಕತ್ವದ ಶಿವಪ್ರಸಾದ್ ದೋಣಿ, ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮೀನುಗಾರಿಕೆಗೆ ತೆರಳಿತ್ತು. ಮಡಿಕಲ್ ಎಲ್.ಪಿ. ಸಮೀಪ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ, ದೋಣಿಯಲ್ಲಿ 9 ಜನ ಮೀನುಗಾರರು ನೀರುಪಾಲಾಗಿದ್ದರು. ಇತ್ತೀಚೆಗೆ ನಡೆದ ಘಟನೆಯನ್ನು ಗಮನದಲ್ಲಿರಿಸಿ ಮೀನುಗಾರರು ಲೈಪ್ ಜಾಕೆಟ್ ಧರಿಸಿದ ಪರಿಣಾಮ ಸಮುದ್ರದಲ್ಲಿ ತೇಲುತ್ತಾ ದಡ ಸೇರುವ ಯತ್ನ ಮಾಡಿದ್ದಾರೆ. ಬಳಿಕ ಘಟನೆಯನ್ನು ಗಮನಿಸಿದ ದಡದಲ್ಲಿದ್ದ ಮೀನುಗಾರರು ರೋಪ್ ನೀಡಿ ಮೀನುಗಾರರನ್ನು ದಡ ಮುಟ್ಟಿಸಿದ್ದಾರೆ. ಘಟನೆಯಲ್ಲಿ ದೋಣಿಗೆ ಹಾನಿಯಾಗಿದ್ದು, ಎಂಜಿನ್, ಬಲೆ ಸಹಿತ ಲಕ್ಷಾಂತರ ರೂಪಾಯಿ ಸಲಕರಣೆ ನಷ್ಟವಾಗಿದೆ.

ಘಟನೆಯ ಮಾಹಿತಿ ಪಡೆದ ಕರಾವಳಿ ಕಾವಲು ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.