ಉಡುಪಿ : ಪತ್ರಕರ್ತ ಹಾಗೂ ಖಾಸಗಿ ಕಾಲೇಜಿನ ಉಪಪ್ರಾಂಶುಪಾಲರಾಗಿದ್ದ ಶೇಷಗಿರಿ ಭಟ್ ಆರೂರು ಅವರು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಇಂದು ಬೆಳಿಗ್ಗೆ ಬ್ರಹ್ಮಾವರದಲ್ಲಿ ನಡೆದಿದೆ. ಮನೆಯ ಮಹಡಿಯ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸರಳ ವ್ಯಕ್ತಿತ್ವದ ನಿಷ್ಕಳಂಕ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಶೇಷಗಿರಿ ಭಟ್ ಅವರು ಸಾಮಾಜಿಕ ಹಾಗೂ ಗ್ರಾಮೀಣ ಸಮಸ್ಯೆಗಳ ಕುರಿತ ವಸ್ತುನಿಷ್ಠ ವರದಿಗಳ ಮೂಲಕ ಪ್ರಸಿದ್ಧರಾಗಿದ್ದರು. ಸೌಮ್ಯ ಸ್ವಭಾವದ ಮಿತಭಾಷಿಯಾಗಿದ್ದ ಅವರು ಸಹೋದ್ಯೋಗಿಗಳಲ್ಲಿ ಹಾಗೂ ಓದುಗರಲ್ಲಿ ಅಪಾರ ಗೌರವ ಪಡೆದಿದ್ದರು. ಅವರು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದು, ಬ್ರಹ್ಮಾವರ ತಾಲೂಕು ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ಪತ್ನಿ, ಪುತ್ರ ಹಾಗೂ ತಂದೆ-ತಾಯಿಯನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಪತ್ರಕರ್ತ ವಲಯ ಸೇರಿದಂತೆ ವಿವಿಧ ವಲಯಗಳಲ್ಲಿ ಸಂತಾಪ ವ್ಯಕ್ತವಾಗಿದೆ.



