ಉಡುಪಿ : ಪ್ರಸಿದ್ಧ ಉದ್ಯಮಿ ಮತ್ತು ಕಂಬಳ ಸಂಘಟಕ ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ್ ಆಳ್ವ (29) ಅವರ ಮೃತದೇಹ ಶುಕ್ರವಾರ ಮುಂಜಾನೆ ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಶಾಂಭವಿ ನದಿ ಕಿನಾರೆಯಲ್ಲಿ ಪತ್ತೆಯಾಗಿದೆ. ಸದ್ಯ ಈ ಘಟನೆಯ ಕುರಿತು ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

ಕಂಬಳ ಪ್ರೇಮಿಯಾಗಿದ್ದ ಅಭಿಷೇಕ್ ತಮ್ಮ ತಂದೆಯ ಉದ್ಯಮವನ್ನು ನೋಡಿಕೊಳ್ಳುತ್ತಿದ್ದರು. ವಾಮಂಜೂರು ತಿರುವೈಲುಗುತ್ತು ಕಂಬಳವನ್ನು ಅತ್ಯಂತ ಶಿಸ್ತುಬದ್ಧ ಕಂಬಳವಾಗಿ ರೂಪಿಸಲು ಅವರು ನೀಡಿದ ಸಹಕಾರ ಮಹತ್ವದ್ದಾಗಿತ್ತು.

ಬುಧವಾರ ರಾತ್ರಿ ಸ್ನೇಹಿತರೊಂದಿಗೆ ಊಟ ಮುಗಿಸಿ ಹೊರಟಿದ್ದ ಅಭಿಷೇಕ್ ಬಳಿಕ ನಾಪತ್ತೆಯಾಗಿದ್ದರು.ಗುರುವಾರ ಸಂಜೆ ಮೂಲ್ಕಿ ಬಪ್ಪನಾಡು ಸೇತುವೆ ಬಳಿ ಅವರ ಕಾರು ಪತ್ತೆಯಾಗಿತ್ತು. ಈ ಕುರಿತು ಪಡುಬಿದ್ರೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಶಾಂಭವಿ ನದಿ ತೀರದಲ್ಲಿ ಅವರ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಶಂಕೆ ಬಲವಾಗಿ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.



