ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಗೀತೋತ್ಸವವು ಡಿಸೆಂಬರ್ 7, ಭಾನುವಾರ ಸಂಜೆ ಅದ್ದೂರಿಯಾಗಿ ಸಮಾರೋಪಗೊಳ್ಳಲಿದ್ದು, ಈ ಕಾರ್ಯಕ್ರಮಕ್ಕೆ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಮುಖ್ಯ ಅತಿಥಿಯಾಗಿ ಆಗಮಿಸಲು ಸಮ್ಮತಿಸಿದ್ದಾರೆ.

ಸಂಜೆ 4:00 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಈ ವರ್ಷದ ಗೀತೋತ್ಸವವನ್ನು ನವೆಂಬರ್ 8 ರಂದು ಪೇಜಾವರ ಶ್ರೀಗಳಿಂದ ಉದ್ಘಾಟನೆ ಮಾಡಿದ್ದರು.

ಗೀತಪಾರಾಯಣದ ಪ್ರಮುಖ ಆಕರ್ಷಣೆಯಾಗಿ ನಡೆದ ಲಕ್ಷ ಕಂಠ ಗೀತಪಾರಾಯಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸದ್ಯ ಸಮಾರೋಪ ಕಾರ್ಯಕ್ರಮದ ವೇದಿಕೆಗೆ ಪವನ್ ಕಲ್ಯಾಣ್ ಆಗಮಿಸುತ್ತಿರುವುದು ವಿಶೇಷವಾಗಿದೆ.



