ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಶೀರೂರು ಪರ್ಯಾಯಾರಂಭವಾಗುತ್ತಿದ್ದಂತೆ ನೂತನ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ನಿನ್ನೆಯಿಂದಲೇ ಈ ನಿಯಮಗಳು ಅನುಷ್ಠಾನಕ್ಕೆ ಬಂದಿದ್ದು, ಇನ್ನು ಮುಂದೆ ಮಠಕ್ಕೆ ಆಗಮಿಸುವ ಎಲ್ಲಾ ಭಕ್ತರು ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

ನೂತನ ನಿಯಮಾವಳಿಯಂತೆ ಪುರುಷರು ಅಂಗಿ ಅಥವಾ ಬನಿಯನ್ ಧರಿಸಿ ಮಠದ ಒಳಗೆ ಪ್ರವೇಶಿಸುವಂತಿಲ್ಲ. ಬರ್ಮುಡಾ, ಟೈಟ್ ಸೇರಿದಂತೆ ಅಸಭ್ಯ ಅಥವಾ ದೇವಾಲಯ ದರ್ಶನಕ್ಕೆ ಯೋಗ್ಯವಲ್ಲದ ಉಡುಪುಗಳಿಗೆ ಅವಕಾಶ ಇರುವುದಿಲ್ಲ. ಪುರುಷ ಭಕ್ತರು ಅಂಗಿ–ಬನಿಯನ್ ತೆಗೆದಿಟ್ಟು ದೇವಾಲಯ ಪ್ರವೇಶಿಸಬೇಕೆಂದು ಮಠದ ಆಡಳಿತ ಸೂಚಿಸಿದೆ. ಇದೇ ರೀತಿ ಮಹಿಳೆಯರು ಬರ್ಮುಡಾ ಸೇರಿದಂತೆ ಅನೌಪಚಾರಿಕ ಉಡುಪು ಧರಿಸದೆ, ದೇವಾಲಯದ ಪವಿತ್ರತೆಗೆ ತಕ್ಕಂತೆ ಸಂಸ್ಕೃತ ಉಡುಗೆ ಧರಿಸಿ ದರ್ಶನ ಪಡೆಯಬೇಕು ಎಂದು ಮನವಿ ಮಾಡಲಾಗಿದೆ.

ಈ ಹಿಂದೆ ಮಹಾಪೂಜೆಯ ಸಮಯದಲ್ಲಿ ಮಾತ್ರ ವಸ್ತ್ರ ಸಂಹಿತೆ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದು, ಮಹಾಪೂಜೆಯ ನಂತರ ಅಂಗಿ–ಬನಿಯನ್ ಧರಿಸಲು ಅವಕಾಶ ಇತ್ತು. ಆದರೆ ಈಗ ಪರ್ಯಾಯದ ಬಳಿಕ ದಿನಪೂರ್ತಿ ಹಾಗೂ ರಾತ್ರಿ ವೇಳೆಯವರೆಗೆ ವಿವಿಧ ಪೂಜೆಗಳು ನಡೆಯುವ ಹಿನ್ನೆಲೆಯಲ್ಲಿ, ವಸ್ತ್ರ ಸಂಹಿತೆಯನ್ನು ಶಾಶ್ವತವಾಗಿ ಜಾರಿಗೊಳಿಸಲಾಗಿದೆ ಎಂದು ಮಠದ ಆಡಳಿತ ಸ್ಪಷ್ಟಪಡಿಸಿದೆ.

ಶೀರೂರು ಮಠದ ನೂತನ ಪರ್ಯಾಯ ಸ್ವಾಮಿಗಳ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದ್ದು, ಭಕ್ತರು ದೇಗುಲದ ಗೌರವ ಮತ್ತು ಸಂಪ್ರದಾಯವನ್ನು ಕಾಪಾಡುವ ದೃಷ್ಟಿಯಿಂದ ದರ್ಶನಕ್ಕೆ ಯೋಗ್ಯವಾದ ಬಟ್ಟೆ ಧರಿಸಿ ಬರಬೇಕೆಂದು ಮನವಿ ಮಾಡಲಾಗಿದೆ. ಈ ರೀತಿಯ ವಸ್ತ್ರ ಸಂಹಿತೆ ಈಗಾಗಲೇ ಕೊಲ್ಲೂರು, ಧರ್ಮಸ್ಥಳ ಸೇರಿದಂತೆ ಹಲವು ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಜಾರಿಯಲ್ಲಿದ್ದು, ಅದೇ ಮಾದರಿಯನ್ನು ಉಡುಪಿ ಶ್ರೀ ಕೃಷ್ಣ ಮಠದಲ್ಲಿಯೂ ಅನುಸರಿಸಲಾಗುತ್ತಿದೆ.



