ಉಡುಪಿ : ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮನುಷ್ಯನ ದೇಹ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುವುದರೊಂದಿಗೆ ಉತ್ತಮ ಆರೋಗ್ಯ ಹೊಂದಿ ಪ್ರತಿದಿನ ಕ್ರಿಯಾಶೀಲರಾಗಿ ಇರಲು ಸಾಧ್ಯ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು. ಅವರು ಇಂದು ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘಟನೆಗಳ ಸಹಕಾರದೊಂದಿಗೆ ನಡೆದ 2023-24 ನೇ ಸಾಲಿನ ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ
ಮಾತನಾಡುತ್ತಿದ್ದರು.

ಸರಕಾರ ದೈಹಿಕ ಶಿಕ್ಷಕರುಗಳಲ್ಲಿ ಉತ್ಸಾಹ ಮೂಡಿಸಲು ಅವರುಗಳಿಗೆ ಕ್ರೀಡಾಕೂಟ ಆಯೋಜಿಸಿದ್ದು, ಕ್ರೀಡಾಕೂಟಗಳಿಂದ ಸದೃಢ ಆರೋಗ್ಯ ಹೊಂದಬಹುದಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಹಾಗೂ ಯೋಗಕ್ಷೇಮವನ್ನು ಬೆಂಬಲಿಸುವ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವ ದೈಹಿಕ ಶಿಕ್ಷಕರುಗಳಿಗೆ ಕ್ರೀಡಾಕೂಟವನ್ನು ಆಯೋಜಿಸಿರುವುದು ಸಂತಸದ ಸಂಗತಿ ಎಂದರು. ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವ ದೈಹಿಕ ಶಿಕ್ಷಕರು ಇಂದು ಕ್ರೀಡಾ ಪಟುಗಳಾಗಿ ಭಾಗವಹಿಸುತ್ತಿದ್ದಾರೆ.
ತಮ್ಮ ಶಾಲೆಯ ವಿದ್ಯಾರ್ಥಿಗಳು ದೈಹಿಕ, ಮಾನಸಿಕ ಹಾಗೂ ಶಾರೀರಿಕವಾಗಿ ಬೆಳೆಯಲು ಮಹತ್ವದ ಪಾತ್ರ ವಹಿಸುವ ದೈಹಿಕ ಶಿಕ್ಷಕರುಗಳು ಕ್ರೀಡಾಕೂಟದಲ್ಲಿ ಉತ್ತಮ ರೀತಿಯ ಪ್ರದರ್ಶನ ನೀಡುವಂತಾಗಲಿ ಎಂದರು.
ಜಿಲ್ಲೆಯ ಕ್ರೀಡಾಂಗಣ ಬಹಳಷ್ಟು ಕ್ರೀಡಾ ಚಟುವಟಿಕೆಗಳಿಗೆ ಸ್ಫೂರ್ತಿಯಾಗಿದೆ ಹಾಗೂ ವ್ಯವಸಸ್ಥಿತ ರೀತಿಯಿಂದ ಕೂಡಿದೆ ಎಂದರು.
ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ದೈಹಿಕ ಶಿಕ್ಷಕರ ಕ್ರೀಡಾಕೂಟ ನಡೆಯುತ್ತಿದೆ. ಕ್ರೀಡಾಕೂಟಗಳು ದೈಹಿಕ ಶಿಕ್ಷಕರುಗಳಿಗೆ ಹೊಸದೇನಲ್ಲ. ಅವರುಗಳು ತಮ್ಮ ಶಾಲೆಯ ಮಕ್ಕಳು ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ, ಪ್ರಶಸ್ತಿ ಪಡೆಯಲು ಅವಿರತ ಶ್ರಮ ವಹಿಸುತ್ತಿದ್ದಾರೆ ಎಂದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ದೈಹಿಕ ಶಿಕ್ಷಕರುಗಳು ಭಾಗವಹಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಕ್ರೀಡೆಗಳಲ್ಲಿನ ಭಾಗವಹಿಸುವಿಕೆಯು ಅರೋಗ್ಯದಲ್ಲಿ ಸಮತೋಲವನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ಕ್ರೀಡೆಯಿಂದ ಪ್ರತಿಯೊಬ್ಬರೂ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡಾಕೂಟಗಳಲ್ಲಿ ಶಿಕ್ಷಕರುಗಳು ಸ್ಪರ್ಧಾ ಸ್ಫೂರ್ತಿಯಿಂದ
ಭಾಗವಹಿಸಬೇಕು. ಸೋಲು-ಗೆಲುವು ಆಟದ ನಿಯಮವಷ್ಠೇ ಆಗಿದ್ದು, ಪ್ರಶಸ್ತಿ ಹಾಗೂ ಸೋಲು-ಗೆಲುವುಗಳ ಬಗ್ಗೆ ಗಮನಹರಿಸದೆ ಸ್ಪರ್ಧಾತ್ಮಕ ಮನೋಭಾವದಿಂದ ಪ್ರತಿಯೊಬ್ಬ ದೈಹಿಕ ಶಿಕ್ಷಕರೂ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಹಲವಾರು ಕ್ರೀಡಾ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಕೆಲಸ ಮಾಡಿರುವ ದೈಹಿಕ ಶಿಕ್ಷಕರುಗಳು ಕೆಲವು ಕ್ರೀಡೆಗಳಲ್ಲಿ ಪರಿಣಿತಿಯನ್ನೂ ಹೊಂದಿರುತ್ತಾರೆ. ಇಂತಹ ಶಿಕ್ಷಕರುಗಳು ಇಂದು ತಾವೇ ಸ್ಪರ್ಧಿಗಳಾಗಿ ಭಾಗವಹಿಸುತ್ತಿರುವುದರಿಂದ ಸ್ಪರ್ಧೆಗಳು ಜಿದ್ದಾ ಜಿದ್ದಿನಿಂದ ಕೂಡಿರುವುದರಲ್ಲಿ ಸಂದೇಹವೇ ಇಲ್ಲ. ದೈಹಿಕ ಶಿಕ್ಷಕರುಗಳು ತಮ್ಮ ಶಾಲೆಯ ಮಕ್ಕಳಿಗೂ ಸಹ ಸ್ಪರ್ಧಾತ್ಮಕವಾಗಿ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಕ್ರೀಡಾ ಸ್ಪೂರ್ತಿ ಬೆಳೆಸಬೇಕು ಎಂದ ಅವರು, ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಅಂತರಾಷ್ಟ್ರೀಯ ಕ್ರೀಡಾಪಟು ನಿತ್ಯಾನಂದ ಶೆಟ್ಟಿ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಡಿಡಿಪಿಐ ಗಣಪತಿ, ಉಡುಪಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ, ಐದು ವಲಯಗಳ ದೈಹಿಕ ಶಿಕ್ಷಣ ಪರಿವೀಕ್ಷಕಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆಯ ಅನುಷ್ಠಾನಾಧಿಕಾರಿಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತಾಲೂಕು
ಅಧಿಕಾರಿಗಳು, ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಸತೀಶ್ ಚಂದ್ರ ಶೆಟ್ಟಿ ಚಿತ್ರಪಾಡಿ
ನಿರೂಪಿಸಿದರೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ವಂದಿಸಿದರು.