ಉಡುಪಿ: ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಹಾಗೂ ವಾಟ್ಸಾಪ್ನಲ್ಲಿ ಸ್ವರೂಪ, ಉಡುಪಿ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆಯಲಾಗಿದ್ದು, ವಿವಿಧ ಕಾರಣಗಳನ್ನು ಮುಂದಿಟ್ಟು ಹಣ ನೀಡುವಂತೆ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಸ್ವತಃ ಜಿಲ್ಲಾಧಿಕಾರಿಗಳೇ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದಾರೆ. ನಕಲಿ ಖಾತೆಗಳ ಮೂಲಕ ಹಣದ ಬೇಡಿಕೆ ಇಡುವ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಉಡುಪಿ ಸೈಬರ್ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದೂರು ದಾಖಲಾಗಿದ್ದರೂ ಸಹ ಇನ್ನೂ ಹಣದ ಬೇಡಿಕೆ ಮುಂದುವರಿದಿರುವುದಾಗಿ ತಿಳಿದುಬಂದಿದೆ.

ಸಾರ್ವಜನಿಕರು ಇಂತಹ ನಕಲಿ ಸಂದೇಶಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸಬಾರದು ಹಾಗೂ ಹಣ ನೀಡಬಾರದು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಅನುಮಾನಾಸ್ಪದ ಸಂದೇಶಗಳು ಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.



