ಕೋಟ : ಕುಂದಾಪುರ ವಿಧಾನಸಭಾ ಕ್ಷೇತ್ರದ ಸಾಲಿಗ್ರಾಮ ಮಹಾಶಕ್ತಿ ಕೇಂದ್ರದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ನಾಳೆ ನಡೆಯುವ ಏಕ ವಿನ್ಯಾಸ ನಕ್ಷೆ 9/11 ವಿತರಣೆಗೆ ಗ್ರಾಮ ಪಂಚಾಯಿತಿಗೆ ಅಧಿಕಾರ ಮರಳಿಸಲು ಸಲುವಾಗಿ ಉಡುಪಿ ಜಿಲ್ಲಾ ಕಛೇರಿ ಮುಂದೆ ನಡೆಯುವ ಪ್ರತಿಭಟನಾ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ರಾಜ್ಯ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ಸರಕಾರಿ ಆದೇಶದಂತೆ, ಇಲ್ಲಿಯವರೆಗೆ ಗ್ರಾಮ ಪಂಚಾಯಿತಿಗಳು ನೀಡುತ್ತಿದ್ದ ಏಕ ವಿನ್ಯಾಸ ನಕ್ಷೆ 9/11 ವಿತರಣೆಯ ಹಕ್ಕು ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅಧಿಕಾರ ಮೊಟಕುಗೊಂಡು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿದೆ. ಇದರಿಂದಾಗಿ ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ, ಚಿಕ್ಕಮಗಳೂರು ಜಿಲ್ಲೆಗಳು ಸೇರಿದಂತೆ, ರಾಜ್ಯದ ಕೆಲವೆಡೆ ಜನಸಾಮಾನ್ಯರಿಗೆ ವಾಸ್ತವ್ಯದ ಮನೆ ನಿರ್ಮಿಸಲು ವಿನ್ಯಾಸದ ನಕ್ಷೆಗೆ ಪ್ರಾಧಿಕಾರಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆರಡು ವಾರದಲ್ಲಿ ಗ್ರಾಮ ಪಂಚಾಯತ್ ಗಳ ಮೂಲಕ ಸಿಗುತ್ತಿದ್ದ 9/11 ನಕ್ಷೆಗಳು, ಆರೇಳು ತಿಂಗಳಾದರೂ ಸಿಗುತ್ತಿಲ್ಲ. ಉಡುಪಿ ಜಿಲ್ಲೆಯೊಂದರಲ್ಲೇ 10,000 ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಉಳಿದ ಮಾಹಿತಿ ಇದೆ. ಉಡುಪಿ ಜಿಲ್ಲಾ ಬಿಜೆಪಿ ಹಾಗೂ ಓಬಿಸಿ ಮೋರ್ಚಾ ವತಿಯಿಂದ ಪ್ರತಿಭಟನೆ ಕಾರ್ಯಕ್ರಮ ನಡೆಸಲಾಗುತ್ತಿದೆ ವಂಚಿತ ಫಲನುಭಾವಿಗಳು ಭಾಗವಹಿಸಿವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕುಂದಾಪುರ ಮಂಡಲ ನಿಕಟ ಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ ಅವರು ಪ್ರಾಸ್ತಾವಿಕ ಮಾತನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ ಸರ್ವರನ್ನು ಸ್ವಾಗತಿಸಿ ಪಕ್ಷ ಸಂಘಟನೆಯ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಜಯೇಂದ್ರ ಪೂಜಾರಿ ವಹಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷೆ ಶ್ರೀಮತಿ ಗಿರಿಜಾ ಪೂಜಾರ್ತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಅನುಸೂಯ ಹೇರ್ಳೆ ಉಪಸ್ಥಿತರಿದ್ದರು. ಕುಂದಾಪುರ ಮಂಡಲ ಓಬಿಸಿ ಮೋರ್ಚಾ ಆಧ್ಯಕ್ಷ ಸುರೇಂದ್ರ ಕಾಂಚನ್ ಸಂಗಮ್ ಕಾರ್ಯಕ್ರಮವನ್ನ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಾದ ಸಿ.ಎ.ಬ್ಯಾಂಕ್ ಮಾಜಿ ಡೈರೆಕ್ಟರ್ ರಾಜೇಶ್ ಉಪಾಧ್ಯಾಯ, ಪಟ್ಟಣ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷೆ ಸಾಧು ಪಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ಕರುಣಾಕರ ಪೂಜಾರಿ ಹಾಗೂ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರದ ಪ್ರಮುಖರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು