ಉಡುಪಿ: ಉಡುಪಿಯಲ್ಲಿ ಜ್ಯುವೆಲರಿ ವರ್ಕ್ ಶಾಪ್ ವೊಂದಕ್ಕೆ ನುಗ್ಗಿ ಚಿನ್ನದ ಗಟ್ಟಿಗಳನ್ನು ಸೋಮವಾರ ತಡರಾತ್ರಿ ಕಳ್ಳರು ಕಳವು ಮಾಡಿದ ಘಟನೆ ನಡೆದಿದೆ. ಉಡುಪಿ ಚಿತ್ರರಂಜನ್ ಸರ್ಕಲ್ ಬಳಿಯ ಚಿನ್ನ ಮತ್ತು ಬೆಳ್ಳಿ ಕರಗಿಸುವ ‘ವೈಭವ್ ರಿಫೈನರ್’ ಎಂಬ ಅಂಗಡಿಯಲ್ಲಿ ಕಳವು ನಡೆದಿದೆ.

ನಕಲಿ ಬೀಗ ಬಳಸಿ ಒಳನುಗ್ಗಿದ ಕಳ್ಳರು ಜುವೆಲ್ಲರಿ ಶಾಪ್ ನ ಡ್ರಾವರ್‌ನ ನಕಲಿ ಬೀಗದಿಂದ 600 ಗ್ರಾಂ ತೂಕದ ಸುಮಾರು 6 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ ಮತ್ತು ಗೋಲ್ಡ್ ಲಿಕ್ವಿಡ್ ಸೇರಿದಂತೆ ವಿವಿಧ ಸೊತ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಹಿಂದೆ ಅಂಗಡಿಯಲ್ಲಿ ದುಡಿಯುತ್ತಿದ್ದ ಕಾರ್ಮಿಕರೇ ಈ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿರುವ ಸಂದೇಹ ವ್ಯಕ್ತವಾಗಿದ್ದು, ಪೊಲೀಸರು ಅವರ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭಿಸಬೇಕಾಗಿದೆ. ಸ್ಥಳಕ್ಕೆ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ ಭೇಟಿ ನೀಡಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.