ಉಡುಪಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸ್ವಸ್ಥವೃತ್ತ ವಿಭಾಗವು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಕೇಂದ್ರ ನವದೆಹಲಿಯ ಪ್ರಾಯೋಜಕತ್ವದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ – ‘ಯೋಗಸಂಗಮ’ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಚರಿಸಲಾಯಿತು. ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯ ಆಯುರ್ವೇದ ಸಲಹೆಗಾರ ಡಾ ಕೌಸ್ತುಭ ಉಪಾಧ್ಯಾಯ, ‘ಯೋಗಸಂಗಮ – 2025’ರ ಉದ್ಘಾಟನೆಯನ್ನು ನೆರವೇರಿಸಿ ಯೋಗಸಂಗಮದ ಮಹತ್ವವನ್ನು ತಿಳಿಸುತ್ತಾ ಆಯುಷ್ ಸಚಿವಾಲಯ ಹಮ್ಮಿಕೊಂಡಂತಹ 10 ಯೋಜನೆಗಳನ್ನು ವಿವರಿಸಿ ಯೋಗಾಭ್ಯಾಸದ ಮೂಲಕ ನಾವೆಲ್ಲರೂ ಸ್ವಸ್ಥರಾಗಿರೋಣ ಎಂದರು.

ಸಮಾರಂಭದ ಅತಿಥಿಗಳಾಗಿ ಆಗಮಿಸಿದ ಶಾಸಕ ಯಶ್ಪಾಲ್ ಆನಂದ ಸುವರ್ಣ, ಮಾತನಾಡುತ್ತಾ ಯೋಗ ದೈಹಿಕ ಮಾನಸಿಕ ಆರೋಗ್ಯದ ಮೂಲವಾಗಿದ್ದು ಅದನ್ನು ಪ್ರತಿಯೊಬ್ಬರೂ ಪ್ರತಿನಿತ್ಯ ಅಭ್ಯಾಸ ಮಾಡುವುದು ಉತ್ತಮ ಎಂದರು. ಸಮಾರಂಭದ ಅತಿಥಿ ಶಾಸಕ ಕಾಪು ಗುರ್ಮೆ ಸುರೇಶ್ ಮಾತನಾಡುತ್ತಾ ಭಾರತ ದೇಶವು ಹಲವಾರು ಸಂಸ್ಕೃತಿಯ ಬೀಡು, ಹಿರಿಯರ ಆರೋಗ್ಯದ ಪಾಲನೆಯ ಪ್ರಮುಖ ಅಂಗವಾದ ಆಹಾರ ಮತ್ತು ಯೋಗ ಸ್ವಸ್ಥ ಬದುಕನ್ನು ಬಾಳಲು ಸಹಕಾರಿಯಾಗಿದೆ ಎಂದರು. ಮಾಜಿ ಸಂಸದ ಕೆ.ವಿರೂಪಾಕ್ಷ, ಮಾತನಾಡುತ್ತಾ ಯೋಗದಲ್ಲಿ ಭಾರತವು ವಿಶ್ವಗುರು ಸ್ಥಾನವನ್ನು ಪಡೆದಿದ್ದು ಪ್ರತಿಯೊಬ್ಬ ವ್ಯಕ್ತಿಯೂ ಯೋಗವನ್ನು ಅಳವಡಿಸಿಕೊಳ್ಳುವುದರಿಂದ ವೈಯಕ್ತಿಕ ಬೆಳವಣಿಗೆಯಲ್ಲಿ ಸಾರ್ಥಕತೆಯನ್ನು ಪಡೆಯಬಹುದೆಂದು ತಿಳಿಸಿದರು. ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಮತ್ತೋರ್ವ ಮುಖ್ಯ ಅತಿಥಿ ಹೂಡೆ ಬೀಚ್ ಹೀಲಿಂಗ್ ಆರೋಗ್ಯ ಕೇಂದ್ರದ ನಿರ್ದೇಶಕ ಡಾ. ಮಹಮ್ಮದ್ ರಫೀಕ್ ಮಾತನಾಡುತ್ತಾ, ಯೋಗ ಇಂದು ಬಹಳ ಜನಪ್ರಿಯತೆಯನ್ನು ಪಡೆಯುತ್ತಿದ್ದು ಎಲ್ಲರ ದಿನಂಪ್ರತಿಯ ಹವ್ಯಾಸವಾಗಲಿ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಪ್ರಾಂಶುಪಾಲ ಡಾ ಮಮತಾ ಕೆ.ವಿ. , ಯೋಗಾಭ್ಯಾಸವು ಒಂದು ದಿನದ ಕಾರ್ಯಕ್ರಮವಾಗದೇ ಪ್ರತಿನಿತ್ಯದ ಪ್ರವೃತ್ತಿಯಾಗಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಆಯುರ್ವೇದ ಆಸ್ಪತ್ರೆಯ ಮುಖ್ಯ ಅಧೀಕ್ಷಕರು ಡಾ ನಾಗರಾಜ್ ಎಸ್. ಉಪಸ್ಥಿತರಿದ್ದರು. ಯೋಗ ಸಂಗಮದ ನೋಡಲ್ ಅಧಿಕಾರಿ ಡಾ. ವಿಜಯ್ ಬಿ. ನೆಗಳೂರ್ ಇವರು ಯೋಗ ಸಂಗಮದ ಪ್ರಾಸ್ಥಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಡಾ ಯೋಗೀಶ ಆಚಾರ್ಯ ವಂದಿಸಿದರು. ಡಾ ಸಂದೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು 800 ಜನರು ಈ ಯೋಗ ಸಂಗಮ ಸಮಾರಂಭದಲ್ಲಿ ಭಾಗಿಯಾಗಿ ಯೋಗಾಭ್ಯಾಸವನ್ನು ಮಾಡಿದರು. ಡಾ ಶ್ರೀನಿಧಿ ಧನ್ಯ ಮತ್ತು ಡಾ ಅರ್ಪಣಾ ರಾಧೇಶ್ ಯೋಗಾಭ್ಯಾಸದ ನೇತೃತ್ವ ವಹಿಸಿದರು. ಡಾ ಸೌಮ್ಯ ಭಟ್ ಮತ್ತು ಸಂಸ್ಥೆಯ ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿ, ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.