ಉಡುಪಿ: ಉಡುಪಿಯಲ್ಲಿ ಪತ್ತೆಯಾದ ಬಾಂಗ್ಲಾದೇಶಿ ಅಕ್ರಮ ವಲಸಿಗರ ಪ್ರಕರಣದಲ್ಲಿ ಉಡುಪಿ ಪ್ರಥಮ ದರ್ಜೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸಿಜೆಎಂ ನ್ಯಾಯಾಲಯವು 10 ಮಂದಿ ಆರೋಪಿತರಿಗೆ 2 ವರ್ಷಗಳ ಕಾಲ ಶಿಕ್ಷೆ ಮತ್ತು ತಲಾ 10,000 ರೂಪಾಯಿ ದಂಡ ವಿಧಿಸಿರುವ ಮಹತ್ವದ ತೀರ್ಪು ನೀಡಿದೆ.

ಅಕ್ಟೋಬರ್ 11 2024 ರಂದು ಮಲ್ಪೆ ಪೊಲೀಸ್ರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ 7 ಗಂಟೆ ಸುಮಾರಿಗೆ ಮಲ್ಪೆ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ 7 ಮಂದಿ ಅನುಮಾನಾಸ್ಪದವಾಗಿ ಲಗೇಜ್ ಸಮೇತ ಸಂಚರಿಸುತ್ತಿರುವುದು ಗಮನಿಸಿ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸ್ ಪರಿಶೀಲನೆ ನಡೆಸಿದಾಗ ಯಾವುದೇ ಮಾನ್ಯ ಅನುಮತಿ ದಾಖಲೆಗಳಿಲ್ಲದೆ ಭಾರತದಲ್ಲಿ ವಾಸವಿದ್ದು, ನಕಲಿ ಆಧಾರ್ ಕಾರ್ಡ್ಗಳನ್ನು ಸೃಷ್ಟಿಸಿಕೊಂಡಿರುವುದು, ಸುಳ್ಳು ಮಾಹಿತಿ ನೀಡಿ ವಂಚನೆ ಮಾಡಲು ಯತ್ನಿಸಿರುವುದು ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿರುವುದು ಸ್ಪಷ್ಟವಾಗಿದೆ.

ಈ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸರು ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ, ಹಕೀಮ್ ಆಲಿ, ಸುಜೋನ್ ಎಸ್.ಕೆ @ ಫಾರೂಕ್, ಇಸ್ಮಾಯಿಲ್ ಎಸ್.ಕೆ @ ಮಹಮದ್ ಇಸ್ಮಾಯಿಲ್ ಹಾಕ್, ಕರೀಮ್ ಎಸ್.ಕೆ @ ಅಬ್ದುಲ್ ಕರೀಮ್, ಸಲಾಂ ಎಸ್.ಕೆ @ ಎಮ್ಡಿ ಅಬ್ದುಲ್ ಅಜೀಜ್, ರಾಜಿಕುಲ್ ಎಸ್.ಕೆ, ಮೊಹಮ್ಮದ್ ಸೋಜಿಬ್ @ ಎಮ್ಡಿ ಅಲ್ಲಾಂ ಆಲಿ, ರಿಮೂಲ್ @ ಅಬ್ದುಲ್ ರೆಹಮಾನ್, ಮೊಹಮ್ಮದ್ ಇಮಾಮ್ ಶೇಖ್ ಮತ್ತು ಮೊಹಮ್ಮದ್ ಜಹಾಂಗಿರ್ ಆಲಂ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. 10 ಮಂದಿಯ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ನ್ಯಾಯಾಲಯವು ಪ್ರತಿಯೊಬ್ಬ ಆರೋಪಿತನಿಗೆ 2 ವರ್ಷಗಳ ಜೈಲು ಶಿಕ್ಷೆ, ತಲಾ 10,000 ರೂಪಾಯಿ ದಂಡ ವಿಧಿಸಿದೆ. ಈ ಪ್ರಕರಣದಲ್ಲಿ ಮಲ್ಪೆ ಪೊಲೀಸ್ ತಂಡದ ಕಾರ್ಯಾಚರಣೆಗೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.



