ಉಡುಪಿ : ಉಡುಪಿಯಿಂದ ಮಂಗಳೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ (ಎನ್ ಎಚ್ -66)ಯ ಉಚ್ಚಿಲ ಸರ್ವೀಸ್ ರಸ್ತೆ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ನಿರಂತರ ಮಳೆಯಿಂದಾಗಿ ರಸ್ತೆ ಜಲಾವೃತವಾಗಿದ್ದು, ಅನೇಕ ಕಡೆಗಳಲ್ಲಿ ದೊಡ್ಡ ಗುಂಡಿಗಳು ಉಂಟಾಗಿವೆ. ಈ ಬಗ್ಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಸಂಸದರ ಪತ್ರಕ್ಕೆ ದೂರಾವಾಣಿ ಮುಖಾಂತರ ಮಾತನಾಡಿದ ಯೋಜನಾ ನಿರ್ದೇಶಕರು, ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಉಚ್ಚಿಲ ಸರ್ವೀಸ್ ರಸ್ತೆಯ ಅಭಿವೃದ್ಧಿ ಕೆಲಸಗಳು ಸ್ವಲ್ಪ ದಿನದ ಮಟ್ಟಿಗೆ ಕುಂಠಿತಗೊಳ್ಳುತ್ತಿದ್ದು, ಇನ್ನೆರಡು ದಿನಗಳಲ್ಲಿ ಸರ್ವಿಸ್ ರಸ್ತೆಯ 1 ಕಿ.ಮೀ ಹೊಂಡ ಬಿದ್ದ ಜಾಗವನ್ನು ದುರಸ್ಥಿ ಪಡಿಸುವುದಾಗಿ ತಿಳಿಸಿದ್ದಾರೆ.