ಉಡುಪಿ :ಜಿಲ್ಲೆಯ ಬೈಂದೂರು–ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ಮಾರ್ಗವಾಗಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನುಬಾಹಿರವಾಗಿ ರವಾನಿಸುತ್ತಿದ್ದ ಲಾರಿಯನ್ನು ಗಂಗೊಳ್ಳಿ ಪೊಲೀಸರು ಪತ್ತೆಹಚ್ಚಿ, ಚಾಲಕನನ್ನು ಬಂಧಿಸಿದ್ದಾರೆ.

ಕುಂದಾಪುರ ಆಹಾರ ನಿರೀಕ್ಷಕರಾದ ಸುರೇಶ್ ಎಚ್.ಎಸ್. ಅವರಿಗೆ ಬಂದ ಖಚಿತ ಮಾಹಿತಿ ಆಧರಿಸಿ, ಗಂಗೊಳ್ಳಿ ಪೊಲೀಸ್ ರು ಶನಿವಾರ ಬೆಳಿಗ್ಗೆ 10:50ರ ಸುಮಾರಿಗೆ ತ್ರಾಸಿ ಗ್ರಾಮದ ಮರವಂತೆ ಬೀಚ್ ಸಮೀಪದ ಕ್ರಾಸ್ ರಸ್ತೆಯಲ್ಲಿ ಕಾರ್ಯಚರಣೆ ನಡೆಸಿದ್ದಾರೆ. ಪೊಲೀಸ್ ರನ್ನು ನೋಡಿದ ಅಕ್ರಮ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿ ಚಾಲಕ ವಾಹನ ನಿಲ್ಲಿಸಿ ಓಡಿ ಹೋಗಲು ಯತ್ನಿಸಿದ್ದಾರೆ. ಪೊಲೀಸರು ಸುತ್ತುವರಿದು ಲಾರಿ ಚಾಲಕ ನಂಜುಂಡ ಕೆ.ಆರ್ ನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಭಟ್ಕಳದ ಶಫೀಕ್ ಸಾಹೇಬ್ ಅವರಿಗೆ ಸೇರಿದ ಲಾರಿ ಇದು ಎಂದು ತಿಳಿದು ಬಂದಿದೆ, ಲಾರ ಎಂಬವರಾಗಿದ್ದಾರೆಂದು ತಿಳಿದುಬಂದಿದೆ.

ಸರ್ಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಮೀಸಲಾದ ಅಕ್ಕಿಯನ್ನು ಅಕ್ರಮವಾಗಿ ವ್ಯಾಪಾರ ಉದ್ದೇಶಕ್ಕಾಗಿ ಲಾರಿಯಲ್ಲಿ ಒಟ್ಟು 214 ಚೀಲಗಳಲ್ಲಿ ಸುಮಾರು 107 ಕ್ವಿಂಟಾಲ್ ಅಕ್ಕಿ ತುಂಬಿ ಸಾಗಾಟ ಮಾಡಲಾಗಿತ್ತು. 2,56,800 ರೂಪಾಯಿ ಮೌಲ್ಯದ ಅಕ್ಕಿಯನ್ನು ಮಂಡ್ಯ ಜಿಲ್ಲೆಯ ಶ್ರೀ ಬಸವೇಶ್ವರ ಅಗ್ರೋ ರೈಸ್ ಇಂಡಸ್ಟ್ರೀಸ್, ಎಂ.ಜಿ ರಸ್ತೆ, 2ನೇ ಅಡ್ಡರಸ್ತೆಗೆ ತಲುಪಿಸಲು ಕಳುಹಿಸಲಾಗಿತ್ತು ಎಂದು ಚಾಲಕ ತಿಳಿಸಿದ್ದಾನೆ. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂಜುಂಡ ಕೆ.ಆರ್ ಮತ್ತು ಶಫೀಕ್ ಸಾಹೇಬ್ ವಿರುದ್ಧ ಮುಂದಿನ ತನಿಖೆ ಮುಂದುವರಿದಿದೆ.



