ಉಡುಪಿ : ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯು ಇ.ಎಸ್.ಐ (ಉದ್ಯೋಗ ರಾಜ್ಯ ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ತೋರಿಸುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ, ಭಾರತೀಯ ಜನತಾ ಪಕ್ಷದ ಅಸಂಘಟಿತ ಕಾರ್ಮಿಕರ ಪ್ರಕೋಷ್ಠ ಉಡುಪಿ ಜಿಲ್ಲೆ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಕಾರ್ಮಿಕ ಇಲಾಖೆಯ ನಿರ್ಲಕ್ಷ್ಯದಿಂದ ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳೊಂದಿಗೆ ಇ.ಎಸ್.ಐ ಯೋಜನೆಯ ನೊಂದಾವಣೆ ಮತ್ತು ಒಪ್ಪಂದ ಪ್ರಕ್ರಿಯೆ ಸಕಾಲದಲ್ಲಿ ಪೂರ್ಣಗೊಳ್ಳದಿರುವುದರಿಂದ ಕಾರ್ಮಿಕರು ಚಿಕಿತ್ಸೆಗೆ ಪರದಾಡುವಂತಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಖಾಸಗಿ ಆಸ್ಪತ್ರೆಗಳು ನೊಂದಾಯಿಸಲು ಸಿದ್ಧವಾಗಿದ್ದರೂ ಕಾರ್ಮಿಕ ಇಲಾಖೆಯ ಬೇಜವಾಬ್ದಾರಿಯಿಂದಾಗಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದರ ಪರಿಣಾಮವಾಗಿ ಬಡ ಕಾರ್ಮಿಕರು ಅಗತ್ಯ ವೈದ್ಯಕೀಯ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಪ್ರಕೋಷ್ಠದ ನಾಯಕರು ಆರೋಪಿಸಿದರು. ಬಿಜೆಪಿ ಶಾಸಕರು ಮತ್ತು ಸಂಸದರು ಈ ವಿಚಾರದಲ್ಲಿ ಒತ್ತಡ ಹೇರಿದ ಪರಿಣಾಮ ತಾತ್ಕಾಲಿಕವಾಗಿ ನವೆಂಬರ್ 15ರವರೆಗೆ ಇ.ಎಸ್.ಐ ಸೌಲಭ್ಯ ವಿಸ್ತರಿಸಲಾಗಿದೆ. ಆದರೆ ಆ ದಿನಾಂಕದ ನಂತರ ಮತ್ತೆ ರೋಗಿಗಳು ತೊಂದರೆ ಅನುಭವಿಸುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಭಾರತೀಯ ಜನತಾ ಪಕ್ಷದ ಅಸಂಘಟಿತ ಕಾರ್ಮಿಕ ಪ್ರಕೋಷ್ಠ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಕಾರ್ಮಿಕ ಸಚಿವರಿಗೆ ಸೂಕ್ತ ನಿರ್ದೇಶನ ನೀಡಿ, ಇ.ಎಸ್.ಐ ಸೌಲಭ್ಯವನ್ನು ಕನಿಷ್ಠ 3 ರಿಂದ 5 ವರ್ಷಗಳವರೆಗೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಕಾರ್ಮಿಕರಿಂದ ಹಾಗೂ ಕಾರ್ಖಾನೆ ಮಾಲೀಕರಿಂದ ಸಂಗ್ರಹಿಸಲ್ಪಡುವ ಹಣದಿಂದ ಈ ಯೋಜನೆ ನಡೆಯುತ್ತಿದ್ದರೂ, ಸರ್ಕಾರಿ ನಿರ್ಲಕ್ಷ್ಯದಿಂದ ಕಾರ್ಮಿಕರು ನ್ಯಾಯಸಮ್ಮತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಮನವಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಪಕ್ಷದ ಅಸಂಘಟಿತ ಕಾರ್ಮಿಕ ಪ್ರಕೋಷ್ಠ ಜಿಲ್ಲಾ ಸಂಚಾಲಕ ಅರುಣ್ ಕುಮಾರ್ ಬಾಣ, ಜಿಲ್ಲಾ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ, ಅಲೆವೂರು ಶ್ರೀಕಾಂತ್ ನಾಯಕ್, ಶ್ರೀಮತಿ ಜ್ಯೋತಿ ಉದಯ್ ಕುಮಾರ್, ಸಂತೋಷ್ ಪೂಜಾರಿ ನೇರಳಕಟ್ಟೆ, ಶ್ರೀಮತಿ ನಳಿನಿ ಪ್ರದೀಪ್, ಶ್ರೀಮತಿ ಸಂಧ್ಯಾ, ಕಿರಣ್ ಪೂಜಾರಿ ತೆಕ್ಕಟ್ಟೆ, ಸಂತೋಷ್ ಶೆಟ್ಟಿ ಕುಂದಾಪುರ, ಶೈಲೇಂದ್ರ ಮಣಿಪಾಲ್, ಸುಧೀರ್ ಕೆ.ಎಸ್, ಸತೀಶ್ ಪೂಜಾರಿ ವಕ್ವಾಡಿ, ಸುರೇಂದ್ರ ಕಾಂಚನ್, ಶ್ರೀಮತಿ ಲೀಲಾ ಪೂಜಾರಿ ಇನ್ನೂ ಮುಂತಾದ ಮುಖಂಡರು ಹಾಜರಿದ್ದರು.



