ಉಡುಪಿ: ಇತ್ತೀಚಿಗೆ ಕಾಮಗಾರಿ ಪೂರ್ಣಗೊಂಡಿರುವ ಉಡುಪಿ–ಇಂದ್ರಾಳಿ ಸೇತುವೆ ಬಳಿಯಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಅನುಕೂಲತೆಗಾಗಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಶಾಲಾ ಮಕ್ಕಳು, ರೈಲ್ವೆ ಪ್ರಯಾಣಿಕರು ಹಾಗೂ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಸಾಧಿಸುವ ಯಾತ್ರಿಕರು ಸೇತುವೆ ಬಳಿಯ ರಸ್ತೆಯನ್ನು ದಾಟಲು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುರಕ್ಷತೆಗಾಗಿ ಮೆಟ್ಟಲು ವ್ಯವಸ್ಥೆ ಸ್ಥಾಪಿಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಅದೇ ರೀತಿಯಲ್ಲಿ, ಸೇತುವೆ ಬಳಿ ಜೀಬ್ರಾ ಕ್ರಾಸಿಂಗ್ ಅಳವಡಿಸಲು, ಪಾದಚಾರಿಗಳಿಗಾಗಿ ಗ್ರಿಲ್ ನಿರ್ಮಿಸಲು, ಎರಡು ಬದಿಯಲ್ಲೂ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಲು ಮತ್ತು ಟ್ರಾಫಿಕ್ ನಿಯಮದಂತೆ ವೇಗ ಮಿತಿಯ ಫಲಕ ಅಳವಡಿಸಲು ಅವರು ಜಿಲ್ಲಾಡಳಿತವನ್ನು ವಿನಂತಿಸಿದ್ದಾರೆ.

ಇಂದ್ರಾಳಿ ಸೇತುವೆ ಪ್ರಸ್ತುತ ಉಡುಪಿ ನಗರ ಮತ್ತು ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ದಿನನಿತ್ಯ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆ. ಈ ಹಿನ್ನೆಲೆ ಪಾದಚಾರಿಗಳ ಸುರಕ್ಷತೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ವಲಯದಿಂದ ಆಗ್ರಹ ವ್ಯಕ್ತವಾಗಿದೆ.