ಉಡುಪಿ : ಬಹುನಿರೀಕ್ಷಿತ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗುವ ಮುಹೂರ್ತ ನಿಗದಿಯಾಗಿದೆ. ಅಪೂರ್ಣ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ ಸಪ್ಟಂಬರ್ 22 ರಂದು ವಾಹನ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಇಂದು ಇಂದ್ರಾಳಿ ರೈಲ್ವೇ ಮೇಲ್ಸೇತುವೆಯನ್ನು ವೀಕ್ಷಿಸಲು ಬಂದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇತುವೆಯ ಇಕ್ಕೆಲದಲ್ಲಿ ಸಂಪರ್ಕ ಹೊಂದಿರುವ ಸ್ಥಳವನ್ನು ಪರಿಶೀಲಿಸಿ, ರಸ್ತೆಯನ್ನು ಅಗಲಗೊಳಿಸುವ ಮತ್ತು ಪಕ್ಕದಲ್ಲಿನ ರಿವಿಟ್ಮೆಂಟ್ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಸನಿಹದಲ್ಲಿರುವ ಖಾಸಗಿ ಶಾಲೆಗೆ ದಾರಿಯನ್ನು ಸುಗಮಗೊಳಿಸುವ ಬಗ್ಗೆ ಸಲಹೆಯಿತ್ತರು. ಮೇಲ್ಸೇತುವೆಯ ಅಕ್ಕಪಕ್ಕದಲ್ಲಿರುವ ಅಪೂರ್ಣ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ ಸಪ್ಟಂಬರ್ 22 ರಂದು ವಾಹನ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ತಿಳಿಸಿದರು. ಸಂಪೂರ್ಣಗೊಂಡ ಸೇತುವೆಯ ಕಾಮಗಾರಿ ಉದ್ಘಾಟನೆಯನ್ನು ಕೇಂದ್ರ ಹೆದ್ದಾರಿ ಸಚಿವರ ಮೂಲಕ ಲೋಕಾರ್ಪಣೆಗೊಳಿಸಲು ಸಿದ್ಧತೆ ನಡೆಸಲಾಗುವುದೆಂದರು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಹಾಗೂ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ಹಾಗೂ ಸ್ಥಳೀಯ ನಗರಸಭಾ ಸದಸ್ಯ ಗಿರೀಶ್ ಅಂಚನ್, ಅಶೋಕ್ ನಾಯ್ಕ್ ಉಪಸ್ಥಿತರಿದ್ದರು.
