ಉಡುಪಿ: ಮಧ್ಯರಾತ್ರಿ ವಸತಿ ಸಮುಚ್ಛಯದ ಲಿಫ್ಟ್ ನಲ್ಲಿ ಐವರು ವಿದ್ಯಾರ್ಥಿಗಳು ಸಿಲುಕಿ ಪರದಾಡಿದ ಘಟನೆ ನಡೆದಿದೆ. ಇಂದ್ರಾಳಿಯ ಯುನೈಟೆಡ್ ಐಕಾನ್ ವಸತಿ ಸಮುಚ್ಛಯದಲ್ಲಿ ಈ ಘಟನೆ ನಡೆದಿದ್ದು, ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಐವರು ವಿದ್ಯಾರ್ಥಿಗಳನ್ನು ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ಮಧ್ಯರಾತ್ರಿ 12.10ರ ಸುಮಾರಿಗೆ, ನೆಲ ಮಹಡಿಯಲ್ಲಿ ಲಿಫ್ಟ್‌ಗೆ ಪ್ರವೇಶಿಸಿದ್ದ ಮಣಿಪಾಲದ ವಿದ್ಯಾರ್ಥಿಗಳು ಯಾಂತ್ರಿಕ ದೋಷದಿಂದ ಒಳಗೆ ಸಿಲುಕಿಕೊಂಡಿದ್ದರು. ಹೊರಗೆ ಬರಲು ಸಾಧ್ಯವಾಗದ ವಿದ್ಯಾರ್ಥಿಗಳು ತಮ್ಮ ಸ್ನೇಹಿತರ ಮೂಲಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.

ಇದಾದ ಬಳಿಕ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಅರ್ಧ ತಾಸಿನ ಕಾರ್ಯಾಚರಣೆ ನಡೆಸಿ ಲಿಫ್ಟ್‌ನಲ್ಲಿ ಸಿಲುಕಿದ್ದ ಐವರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರತೆಗೆದರು. ವಿದ್ಯಾರ್ಥಿಗಳು ಆತಂಕಗೊಂಡಿದ್ದರೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾ ಅಧಿಕಾರಿ ರವೀಂದ್ರ, ಪ್ರಮುಖ ಫೈಯರ್‌ಮ್ಯಾನ್ ರಾಘವೇಂದ್ರ, ಫೈಯರ್‌ಮ್ಯಾನ್ ರವಿ ನಾಯ್ಕ್, ಚಾಲಕ ಸುಧೀರ್ ಪಾಲ್ಗೊಂಡಿದ್ದರು.



