ಉಡುಪಿ: ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ಸರಳ ಭಾಷೆ ಹಾಗೂ ಪದಗಳಲ್ಲಿ ತ್ರಿಪದಿಗಳನ್ನು ರಚಿಸುವ ಮೂಲಕ ಸಮಾಜದ ಅಂಧಕಾರವನ್ನು ದೂರಮಾಡಲು ಶ್ರಮಿಸಿದ ಕವಿ ಸರ್ವಜ್ಞರ ತ್ರಿಪದಿಗಳು ಇಂದಿನ ಯುವಪೀಳಿಗೆ ಸನ್ಮಾರ್ಗದ ದಾರಿಯಲ್ಲಿ ಸಾಗಲು ಸಹಕಾರಿಯಾಗಿವೆ ಎಂದು ಎಂ.ಎ. ಗಫೂರ್, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹೇಳಿದರು.

ಅವರು ಹಿರಿಯಡ್ಕದ ಡಾ. ಚಂದಯ್ಯ ಹೆಗ್ಡೆ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಕುಲಾಲ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಲಾದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

16ನೇ ಶತಮಾನದ ಪ್ರಸಿದ್ಧ ಕನ್ನಡ ತ್ರಿಪದಿ ಕವಿಯಾದ ಸರ್ವಜ್ಞರು, ಸಾಮಾಜಿಕ ಸಮಾನತೆ, ನೀತಿ ಮತ್ತು ಜ್ಞಾನವನ್ನು ಸರಳ ತ್ರಿಪದಿಗಳ ಮೂಲಕ ಜನಸಾಮಾನ್ಯರಿಗೆ ಬೋಧಿಸಿದ್ದಾರೆ. ಅವರ ತ್ರಿಪದಿಗಳು ಇಂದಿಗೂ ಕನ್ನಡ ಸಾಹಿತ್ಯದಲ್ಲಿ ಮಾತ್ರವಲ್ಲದೆ ಸಮಾಜದ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಕವಿ ಸರ್ವಜ್ಞರ ಕುರಿತು ರಸಪ್ರಶ್ನೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶೇಖರ ಕುಲಾಲ್, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಸಂತೋಷ್ ಕುಲಾಲ್, ಕುಲಾಲ ಸಂಘ(ರಿ) ಪೆರ್ಡೂರು ಅಧ್ಯಕ್ಷ ಕಾಳು ಕುಲಾಲ್, ಹಿರಿಯಡ್ಕ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲೆ ವೀಣಾ, ಉಪಪ್ರಾಂಶುಪಾಲ ಪ್ರಕಾಶ್ ಪ್ರಭು, ಉಡುಪಿ ಜಿಲ್ಲಾ ಕುಲಾಲ ಸಂಘ ಒಕ್ಕೂಟದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಾಂಜಿ ನಿರೂಪಿಸಿದರು. ಶಾಲೆಯ ಹಿಂದಿ ಶಿಕ್ಷಕ ರವೀಂದ್ರ ಪ್ರಭು ವಂದಿಸಿದರು.



