ಉಡುಪಿ: ಆಳ್ವಾಸ್ ನುಡಿಸಿರಿ–ವಿರಾಸತ್ ಮೂಲಕದ ಈ ಮೇರು ಸಾಂಸ್ಕೃತಿಕ ವೈಭವವನ್ನು ಶ್ರೀ ಕೃಷ್ಣನಿಗೆ ಸಮರ್ಪಿಸಲಾಗಿದೆ. ಇದು ನಮ್ಮ ಚತುರ್ಥ ಪರ್ಯಾಯ ಅವಧಿಯ 1,650ನೇ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು, ಆಳ್ವಾಸ್ ನುಡಿಸಿರಿ ಅತ್ಯಂತ ಶ್ರೇಷ್ಠವಾಗಿದೆ. ಡಾ. ಮೋಹನ್ ಆಳ್ವ ಅವರು ದೇಶದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಪುತ್ತಿಗೆ ಮಠಾಧೀಶರಾದ ಪರ್ಯಾಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

ಅವರು ಉಡುಪಿಯ ರಾಜಾಂಗಣದ ಸಮೀಪದ ಪಾರ್ಕಿಂಗ್ ಪ್ರದೇಶದಲ್ಲಿರುವ ಶ್ರೀ ವಿಶ್ವೇಶತೀರ್ಥ ಶ್ರೀಪಾದ ವೇದಿಕೆಯಲ್ಲಿ ಆಯೋಜಿಸಲಾದ ಪರ್ಯಾಯ ಶ್ರೀ ಪುತ್ತಿಗೆ ಮಠ ಹಾಗೂ ಶ್ರೀ ಕೃಷ್ಣಮಠದ ಆಶ್ರಯದಲ್ಲಿ ಆಳ್ವಾಸ್ ನುಡಿಸಿರಿ–ವಿರಾಸತ್ ಉಡುಪಿ ಘಟಕದಿಂದ ಆಯೋಜಿಸಲಾದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಹಾಗೂ ಮೂಡುಬಿದಿರೆಯ ಜೈನಮಠದ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮೀಜಿ ಕಾರ್ಯಕ್ರಮಕ್ಕೆ ಅನುಗ್ರಹ ನೀಡಿದರು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಮೂಡುಬಿದಿರೆಗೆ ಸೀಮಿತವಾಗಿ ಆರಂಭವಾದ ಆಳ್ವಾಸ್ ನುಡಿಸಿರಿ ಇಂದು ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಇದು ಮನೋರಂಜನೆಗಷ್ಟೇ ಸೀಮಿತವಲ್ಲ. ಭಾರತದಲ್ಲಿ ಇರುವಷ್ಟು ಕಲೆ, ಸಂಸ್ಕೃತಿ ಮತ್ತು ಪರಂಪರೆ ಬೇರೆ ಯಾವುದೇ ದೇಶದಲ್ಲಿ ಇಲ್ಲ. ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ಮೋಹನ್ ಆಳ್ವ ಅವರಿಗೆ ಶ್ರೀಮಠದ ವತಿಯಿಂದ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು, ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭುವನಪ್ರಸಾದ್ ಹೆಗ್ಡೆ ವಂದಿಸಿದರು.

ಕಾರ್ಯಕ್ರಮದಲ್ಲಿ ಯೋಗ ದೀಪಿಕಾ, ಶಾಸ್ತ್ರೀಯ ನೃತ್ಯ (ಅಷ್ಟಲಕ್ಷ್ಮೀ), ಬಡಗುತಿಟ್ಟು ಯಕ್ಷಗಾನ ಶಂಕರಾರ್ಧ ಶರೀರಿಣಿ, ಗುಜರಾತಿನ ದಾಂಡಿಯ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಮಲ್ಲಕಂಬ ಮತ್ತು ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ ಹಿರಣ್ಯಾಕ್ಷ ವಧೆ ಹಾಗೂ ಬೊಂಬೆ ವಿನೋದಾವಳಿ ಸೇರಿದಂತೆ ಸುಮಾರು ಮೂರೂವರೆ ಗಂಟೆಗಳ ಕಾಲ ನಿರಂತರ ಸಾಂಸ್ಕೃತಿಕ ಪ್ರದರ್ಶನ ನಡೆಯಿತು. ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು.



